ತಿರುವನಂತಪುರಂ : ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಅಂತಾರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕಿ ರಿಹಾನ್ನಾ ಮಾಡಿದ ಟ್ವೀಟ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಭಾರತದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿರುದ್ಧ ಇದೀಗ ಅವರ ಭಾರತೀಯ ಅಭಿಮಾನಿಗಳೇ ತಿರುಗಿಬಿದ್ದಿದ್ದಾರೆ. ತೆಂಡೂಲ್ಕರ್ ಅವರ ಹೇಳಿಕೆಯನ್ನು ವಿರೋಧಿಸಿ, ಅವರು ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ ಅವರ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಕ್ಷಮೆಯಾಚಿಸುತ್ತಿದ್ದಾರೆ.
2015ರಲ್ಲಿ ಸಂದರ್ಶನವೊಂದರಲ್ಲಿ ತಮಗೆ ಸಚಿನ್ ತೆಂಡೂಲ್ಕರ್ ಯಾರೆಂದು ಗೊತ್ತಿಲ್ಲ ಎಂದು ರಷ್ಯಾದ ಮರಿಯಾ ಶರಪೋವಾ ಹೇಳಿದ್ದರು. ಈ ವೇಳೆ ತೆಂಡೂಲ್ಕರ್ ಅಭಿಮಾನಿಗಳು ಶರಪೋವಾ ಅವರನ್ನು ಭಾರೀ ಟ್ರೋಲ್ ಮಾಡಿದ್ದರು. ಇದೀಗ ತೆಂಡೂಲ್ಕರ್ ಅವರ ವರ್ತನೆಯಿಂದ ಬೇಸರಗೊಂಡಿರುವ ಅವರ ಬೆಂಬಲಿಗರು, ಶರಪೋವಾ ಕುರಿತ ಅಂದಿನ ತಮ್ಮ ಟ್ರೋಲ್ ಗಳಿಗೆ ಪಶ್ಚಾತ್ತಾಪ ಪಟ್ಟಿದ್ದಾರೆ. ಅಲ್ಲದೆ, ಶರಪೋವಾರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಬಗ್ಗೆ ಕ್ಷಮೆಯನ್ನೂ ಯಾಚಿಸುತ್ತಿದ್ದಾರೆ.
ಕ್ಷಮಿಸಿ, ಮರಿಯಾ ಲೆಜೆಂಡ್, ನಾವು ಸಚಿನ್ ಅವರನ್ನು ಓರ್ವ ಆಟಗಾರನಾಗಿ ಮಾತ್ರ ತಿಳಿದುಕೊಂಡಿದ್ದೇವೆ. ಆದರೆ, ಓರ್ವ ವ್ಯಕ್ತಿಯಾಗಿ ತಿಳಿದಿಲ್ಲ. ನಿಮ್ಮ ಖಾತೆಯಲ್ಲಿ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಕ್ಷಮಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಭಾರತದಲ್ಲಿ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ರಿಹಾನ್ನಾ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ತೆಂಡೂಲ್ಕರ್, ಭಾರತದ ಆಂತರಿಕ ವಿಷಯಗಳಲ್ಲಿ ವಿದೇಶಿ ಶಕ್ತಿಗಳು ಪ್ರೇಕ್ಷಕರಾಗಿರಬೇಕು, ಭಾಗಿಗಳಾಗಿರಬಾರದು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.