ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವದ ಹೆಗ್ಗುರುತು : ರೈತ ಹೋರಾಟದ ಬಗ್ಗೆ ಅಮೆರಿಕ ಹೇಳಿಕೆ

Prasthutha|

ನವದೆಹಲಿ : ಬಿಜೆಪಿ ಸರಕಾರದ ನೂತನ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತು ಕೃಷಿ ಕಾನೂನಿನ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸರಕಾರ ಪ್ರತಿಕ್ರಿಯಿಸಿದೆ.

- Advertisement -

ಇಂಟರ್ನೆಟ್ ಸಹಿತ ಅಡೆತಡೆಯಿಲ್ಲದೆ ಮಾಹಿತಿ ಪಡೆಯುವುದು ಮತ್ತು ಶಾಂತಿಯುತ ಪ್ರತಿಭಟನೆ ಅಭಿವೃದ್ಧಿ ಹೊಂಡುತ್ತಿರುವ ಪ್ರಜಾಪ್ರಭುತ್ವದ ಹೆಗ್ಗುರುತು ಎಂದು ಅಮೆರಿಕ ತಿಳಿಸಿದೆ. ಆದಾಗ್ಯೂ, ಕೇಂದ್ರ ಸರಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳನ್ನೂ ಬೆಂಬಲಿಸುವ ಮೂಲಕ, ಅದು ವಿಷಯಕ್ಕೆ ಸಂಬಂಧಿಸಿ ಮಧ್ಯಮ ನೀತಿ ಅನುಸರಿಸಿದೆ.  

ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಟ್ವೀಟ್ ಬಳಿಕ, ಭಾರತದ ರೈತರ ಪ್ರತಿಭಟನೆ ಜಾಗತಿಕ ಗಮನ ಸೆಳೆದಿದ್ದು, ಅಮೆರಿಕ ಸರಕಾರ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದೆ.

- Advertisement -

ವಿಷಯಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವಂತೆ ಅದು ಸಲಹೆ ನೀಡಿದೆ. ಆದಾಗ್ಯೂ, ನೂತನ ಕೃಷಿ ಕಾಯ್ದೆಗಳು ಭಾರತದ ಮಾರುಕಟ್ಟೆಯ ದಕ್ಷತೆಯನ್ನು ಸುಧಾರಿಸಲಿವೆ ಮತ್ತು ಖಾಸಗಿ ವಲಯದ ಹೂಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲಿದೆ ಎಂದು ಅದು ತಿಳಿಸಿದೆ.

ಆದರೆ, ರೈತರ ಪ್ರತಿಭಟನೆಗೆ ಸಂಬಂಧಿಸಿ ದೆಹಲಿ ಗಡಿ ಭಾಗ ಹಾಗೂ ಹರ್ಯಾಣದಲ್ಲಿ ಸರಕಾರ ಇಂಟರ್ನೆಟ್ ರದ್ದುಪಡಿಸಿರುವ ಕ್ರಮದ ಬಗ್ಗೆಯೂ ಅಮೆರಿಕ ಪ್ರತಿಕ್ರಿಯಿಸಿದೆ. ಇಂಟರ್ನೆಟ್ ಸೇರಿದಂತೆ ಅಡೆತಡೆಯಿಲ್ಲದ ಮಾಹಿತಿ ಸ್ವೀಕರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೂಲಭೂತವಾದುದು ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವದ ಪ್ರಮುಖ ಹೆಗ್ಗುರುತು ಎಂದು ಅಮೆರಿಕ ಅಭಿಪ್ರಾಯ ಪಟ್ಟಿದೆ.  

ವಿಷಯಕ್ಕೆ ಸಂಬಂಧಿಸಿ ಮಾಧ್ಯಮಗಳ ಪ್ರಶ್ನೆಗೆ ಮೊದಲು ಅಮೆರಿಕ ವಿದೇಶಾಂಗ ಇಲಾಖೆ ಈ ರೀತಿ ಉತ್ತರಿಸಿತ್ತು. ಬಳಿಕ ಇದೇ ಮಾತುಗಳನ್ನು ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ವಕ್ತಾರ ಪುನರುಚ್ಛರಿಸಿದ್ದಾರೆ.

Join Whatsapp