ರೈತರ ಪ್ರತಿಭಟನೆ | ಕೆಲವೆಡೆ ತಾಳ್ಮೆ ಕಳೆದುಕೊಂಡ ರೈತರು; ಬಿಜೆಪಿ ಕಾರ್ಯಕ್ರಮಗಳಲ್ಲಿ ದಾಂಧಲೆ, ಮೊಬೈಲ್ ಟವರ್ ಗೆ ಹಾನಿ

Prasthutha: December 26, 2020

ಚಂಡೀಗಢ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ಕಳೆದ ಒಂದು ತಿಂಗಳಿನಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಉತ್ತರ ಭಾರತದ ರೈತರು ಶುಕ್ರವಾರ ಕೊಂಚ ಸಹನೆ ಕಳೆದುಕೊಂಡಂತೆ ಕಂಡುಬಂದಿದೆ. ಪಂಜಾಬ್, ಉತ್ತರಾಖಂಡ ಸೇರಿದಂತೆ ಹಲವೆಡೆ ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ಪ್ರತಿಭಟನೆ ಹಿಂಸಾ ಸ್ವರೂಪಕ್ಕೆ ತಿರುಗಿತ್ತು.

ಬಟಿಂಡಾದಲ್ಲಿ ಬಿಜೆಪಿ ಕಚೇರಿಯಲ್ಲಿ ದಾಂಧಲೆ : ಪಂಜಾಬ್ ನ ಬಟಿಂಡಾದಲ್ಲಿ ಬಿಜೆಪಿ ಮುಖಂಡರನ್ನು ಗುರಿಯಾಗಿಸಿ ರೈತರು ದಾಳಿ ನಡೆಸಿದ್ದಾರೆ. ಬಿಜೆಪಿ ಕಚೇರಿಯೊಂದರಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಪ್ರತಿಭಟನಾ ನಿರತ ರೈತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ದಾಂಧಲೆ ನಡೆಸಿ, ಕುರ್ಚಿಗಳನ್ನು ಮುರಿದು ಹಾಕಿ, ಎಲ್ ಇಡಿ ಟಿವಿಯನ್ನು ಒಡೆದು ಹಾಕಿ, ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬಟಿಂಡ ಬಿಜೆಪಿ ಮುಖ್ಯಸ್ಥ ವಿನೋದ್ ಗುಪ್ತಾ, ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕ ರವೀಂದರ್ ಗುಪ್ತ ಸೇರಿದಂತೆ ಐವರಿಗೆ ಘಟನೆಯಲ್ಲಿ ಗಾಯಗಳಾಗಿವೆ. ರೈತರ ದಾಳಿಯ ವೇಳೆ ಬಿಜೆಪಿ ಕಾರ್ಯಕರ್ತರು ದಿಕ್ಕುಪಾಲಾಗಿ ಓಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.

ಜಲಂಧರ್ ನಲ್ಲಿ ಬಿಜೆಪಿ ನಾಯಕನ ಮನೆಗೆ ಮುತ್ತಿಗೆ : ಜಲಂಧರ್ ಕಂಟೋನ್ಮೆಂಟ್ ನಲ್ಲಿ ಕುಡ ಬಿಜೆಪಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ರೈತರು ದಾಳಿ ನಡೆಸಿದ್ದಾರೆ. ನಂತರ ಬಿಜೆಪಿ ನಾಯಕ ಮನೋರಂಜನ್ ಕಳಿಯಾ ಅವರ ನಿವಾಸದ ಮೇಲೆ ಮುತ್ತಿಗೆ ಹಾಕಲು ಯತ್ನಿಸಲಾಗಿದೆ. ಈ ವೇಳೆ ಲಾಠಿಚಾರ್ಜ್ ನಡೆದಿದೆ. ಹಲವರಿಗೆ ಗಾಯಗಳಾಗಿವೆ.

ಫಗ್ವಾರದಲ್ಲಿ ಹಿಂದಿನ ಬಾಗಿಲಿನಿಂದ ಓಡಿದ ಬಿಜೆಪಿಗರು : ಫಗ್ವಾರದಲ್ಲಿ ಖಾಸಗಿ ಹೋಟೆಲೊಂದರಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಬಿಜೆಪಿ ಆಯೋಜಿಸಿತ್ತು. ಅಲ್ಲಿ ರೈತರು ಪ್ರತಿಭಟನೆ ನಿರತರಾದ ಹಿನ್ನೆಲೆಯಲ್ಲಿ, ಬಿಜೆಪಿ ಮುಖಂಡರು ಪೊಲೀಸ್ ರಕ್ಷಣೆಯಲ್ಲಿ ಹಿಂದಿನ ಬಾಗಿಲಿನಿಂದ ಓಡಿ ಹೋದರೆಂದು ವರದಿಯೊಂದು ತಿಳಿಸಿದೆ. ಹೋಟೆಲ್ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಸೇರಿದ್ದು, ಅವರು ದನ ಹಾಗೂ ಕೋಳಿ ಆಹಾರ ಪೂರೈಕೆ ಮಾಡುವ ಉದ್ಯಮವನ್ನೂ ನಡೆಸುತ್ತಿದ್ದಾರೆ. ರೈತರು ಅವರ ಉತ್ಪನ್ನಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಕೆಲವು ಪ್ರಮುಖ ಬಿಜೆಪಿ ನಾಯಕರನ್ನು ಹೋಟೆಲ್ ಒಳಗೆ ಪ್ರವೇಶಿಸದಂತೆ ತಡೆದ ಘಟನೆಗಳೂ ನಡೆದವು.

ಟವರ್ ಗಳು ಟಾರ್ಗೆಟ್ : ಪಂಜಾಬ್ ನಲ್ಲಿ ರಿಲಯನ್ಸ್ ಸಮೂಹದ ಜಿಯೊ ಮೊಬೈಲ್ ಟವರ್ ಗಳನ್ನು ಗುರಿಯಾಗಿಸಿ ಪ್ರತಿಭಟನಕಾರರು ದಾಳಿ ನಡೆಸಲಾರಂಭಿಸಿದ್ದಾರೆ. ಮೊಬೈಲ್ ಟವರ್ ಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಸುಮಾರು ಸಾವಿರ ಟವರ್ ಗಳಿಗೆ ಹಾನಿಯಾಗಿದೆ ಎನ್ನಲಾಗುತ್ತಿದೆ.

ಉತ್ತರಾಖಂಡ್ ನಲ್ಲಿ ಪೊಲೀಸ್ ಬ್ಯಾರಿಕೇಡ್ ಮೇಲೆ ಟ್ರಾಕ್ಟರ್ ಚಲಾಯಿಸಿದ ರೈತರು : ಉತ್ತರಾಖಂಡ್ ನ ಉದಮ್ ಸಿಂಗ್ ನಗರ್ ನಲ್ಲಿ ರೈತರು ದೆಹಲಿಗೆ ಹೊರಟಿದ್ದ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ಅವರನ್ನು ತಡೆಯಲು ಯತ್ನಿಸಿದ್ದರು. ಆದರೆ, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ರೈತರು, ಕೊನೆಗೆ ಬ್ಯಾರಿಕೇಡ್ ಮೇಲೆಯೇ ಟ್ರಾಕ್ಟರ್ ಚಲಾಯಿಸಿ ಪೊಲೀಸ್ ಬ್ಯಾರಿಕೇಡ್ ಅನ್ನು ತಳ್ಳುವ ದೃಶ್ಯವೊಂದು ವೈರಲ್ ಆಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!