ಶಿವಮೊಗ್ಗದಲ್ಲಿ ರೈತ ಮಹಾ ಪಂಚಾಯತ್ ರಣಕಹಳೆ | ರಾಕೇಶ್ ಟಿಕಾಯತ್ ಸೇರಿ ಹಲವರು ಭಾಗಿ

Prasthutha|

ಶಿವಮೊಗ್ಗ:  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟಗಳ ತವರೂರು ಎಂದೇ ಪ್ರಸಿದ್ಧವಾಗಿರುವ ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊದಲ ಮಹಾ ಪಂಚಾಯತ್ ನಡೆದಿದ್ದು, ರೈತ ಸಾಗರವೇ ಹರಿದು ಬಂದಿದೆ.

ರಾಷ್ಟ್ರೀಯ ಕಿಸಾನ್ ಯೂನಿಯನ್ ನಾಯಕರಾದ ರಾಕೇಶ್ ಟಿಕಾಯತ್, ಡಾ. ದರ್ಶನ್ ಪಾಲ್, ಯದುವೀರ್ ಸಿಂಗ್, ರಾಜ್ಯ ರೈತ ನಾಯಕರಾದ ಕೆ.ಟಿ. ಗಂಗಾಧರ್, ಹೆಚ್.ಆರ್. ಬಸವರಾಜಪ್ಪ, ಕೋಡಿಹಳ್ಳಿ ಚಂದ್ರಶೇಖರ್, ಚುಕ್ಕಿ ನಂಜುಂಡಸ್ವಾಮಿ, ಹೋರಾಟಗಾರರಾದ ಕೆ.ಪಿ. ಶ್ರೀಪಾಲ್, ಎಂ. ಶ್ರೀಕಾಂತ್, ಕೆ.ಎಲ್. ಅಶೋಕ್, ಮಾಜಿ ಶಾಸಕ ಮಧು ಬಂಗಾರಪ್ಪ ಕಿಮ್ಮನೆ ರತ್ನಾಕರ್ ಮೊದಲಾದವರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

- Advertisement -

ಈ ವೇಳೆ ರೈತ ಮುಖಂಡ ಹೆಚ್.ಆರ್. ಬಸವರಾಜಪ್ಪ ಮಾತನಾಡಿ “ಮೋದಿಯವರ ಮೊಂಡುತನ ಮತ್ತು ಹಠಮಾರಿತನದಿಂದ ರೈತರು ಇಂದು ಹೋರಾಟ ಕೈಗೆತ್ತಿಕೊಂಡಿದ್ದಾರೆ.‌ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ.‌ ಯಡಿಯೂರಪ್ಪ ತಮ್ಮ ಕ್ಷೇತ್ರದ ಜನತೆಗೆ ಮೋಸ ಮಾಡಿದ್ದಾರೆ.‌ಅವರಿಗೆ ಈ ಚಳುವಳಿಯ ಮೂಲಕ ಸ್ಪಷ್ಟ ಉತ್ತರವನ್ನು ಕೊಡುತ್ತೇವೆ.‌ ರೈತರ ಈ ಹೋರಾಟ 80ರ ದಶಕದ ಇತಿಹಾಸವನ್ನು ನೆನಪಿಸುತ್ತಿದೆ. ರೈತರು ಬೀದಿ ಬೀದಿಗಳಲ್ಲಿ ಸಾಯುವಂತಹ ಸ್ಥಿತಿ ದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿಯೇ ನಾವು ಇಲ್ಲಿ ಎಲ್ಲಾ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಒಂದು ಸೇರಿದ್ದೇವೆ.‌ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ ಎಂದರು.

ನಂತರ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ರಾಕೇಶ್ ಟಿಕಾಯತ್ ರವರನ್ನು ಬಂಧಿಸುವ ಪ್ಲಾನ್ ಮಾಡಿರುವ ಸರಕಾರ ತಾಕತ್ತಿದ್ದರೆ ಬಂಧಿಸಿ ನೋಡೋಣ ಎಂದು ಸರಕಾರಕ್ಕೆ ಸವಾಲು ಹಾಕಿದ್ದಾರೆ. ರೈತರನ್ನು ಮುಟ್ಟಿದರೆ ಶಿವಮೊಗ್ಗದ ಎಲ್ಲಾ ರಸ್ತೆಗಳು ಬಂದ್ ಆಗುತ್ತೆ. ರೈತರ ಶಾಲು ಹಾಕಿಕೊಂಡು ಯಡಿಯೂರಪ್ಪ ನಂಬಿಕೆಗೆ ದ್ರೋಹ ಮಾಡುತ್ತಿದ್ದಾರೆ. ಅಂಬಾನಿ ಮತ್ತು ಅದಾನಿಯವರ ಸಾಲ ಮನ್ನಾ ಮಾಡಿದಂತೆ ರೈತರ ಸಾಲವನ್ನು ಮನ್ನಾ ಮಾಡಿ. ಒಂದು ವೇಳೆ ನೋಟಿಸ್ ನೀಡಲು ಮುಂದಾದರೆ ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಸಮಾವೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು. ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ರೈತ ಚಳುವಳಿಯ ರಾಷ್ಟ್ರೀಯ ನಾಯಕರಾದ ಡಾ. ದರ್ಶನ್ ಪಾಲ್ ಒತ್ತಾಯಿಸಿದ್ದಾರೆ.

- Advertisement -