ಗೋಹತ್ಯೆ ಕಾಯ್ದೆ ಎಫೆಕ್ಟ್; ಜಾನುವಾರುಗಳನ್ನು ವಾರದ ಸಂತೆಯಲ್ಲೇ ಬಿಟ್ಟು ಹೋಗುತ್ತಿರುವ ರೈತರು

Prasthutha|

ಮೈಸೂರು: ಗೋಹತ್ಯೆ ತಡೆ ಕಾಯ್ದೆಯ ಪರಿಣಾಮದಿಂದಾಗಿ ಮೈಸೂರಿನ ಹೆಸರಾಂತ ವಾರದ ಸಂತೆಯಲ್ಲಿ ಜಾನುವಾರು ಮಾರಾಟವಾಗದೆ ರೈತರು ಅವುಗಳನ್ನು ಅಲ್ಲೇ ಬಿಟ್ಟು ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

- Advertisement -


ರೈತರ ಈ ನಿರ್ಧಾರದಿಂದ ಎಲ್ಲೆಂದರಲ್ಲಿ ಬಿಡಾಡಿ ದನಗಳ ಸಮಸ್ಯೆ ಕಾಡುತ್ತಿದ್ದು, ಗೋಹತ್ಯೆ ತಡೆ ಕಾಯ್ದೆ ಜಾರಿಗೆ ಬಂದಾಗಿನಿಂದಲೂ ಮಾರಾಟವಾಗದೆ ಬಾಕಿ ಉಳಿದಿರುವ ಕರು ಹಾಕದ ಕಡಸುಗಳನ್ನು ರೈತರು ಬಿಟ್ಟು ತೆರಳುತ್ತಿದ್ದಾರೆ.
ಜಾನುವಾರು ಖರೀದಿದಾರರು ಗೋ ಹತ್ಯೆ ನಿಷೇಧ ಕಾಯ್ದೆಗೆ ಭಯಪಟ್ಟು ಜಾನುವಾರುಗಳನ್ನು ಖರೀದಿಸುತ್ತಿಲ್ಲ. ಆದ್ದರಿಂದ ನಾವು ಜಾನುವಾರುಗಳನ್ನು ತ್ಯಜಿಸದೆ ಅನ್ಯ ದಾರಿಯಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.


ಬಿಡಾಡಿ ಜಾನುವಾರುಗಳು ಎಲ್ಲೆಂದರಲ್ಲಿ ಅಲೆದಾಡುತ್ತಿವೆ. ಗೋ ಪಾಲಕರು ಮತ್ತು ಗೋಶಾಲೆಗಳಿಲ್ಲದೆ ಅನೇಕ ಜಾನುವಾರುಗಳು ಹಸಿವೆಯಿಂದ ಸಾಯುತ್ತಿವೆ ಎಂಬ ಆಘಾತಕಾರಿ ಅಂಶಗಳು ಬಹಿರಂಗವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ಕುಮಾರ್ ಡಿ.ಎಸ್, ಪ್ರತಿ ಬುಧವಾರ ಸಂತೆ ನಡೆಯುವಾಗ ಕೆಲವು ಜಾನುವಾರುಗಳನ್ನು ರೈತರು ತಂದು ಇಲ್ಲಿ ಬಿಡುತ್ತಿದ್ದಾರೆ. ರೈತರು ಹಾಲು ನೀಡುವುದನ್ನು ನಿಲ್ಲಿಸಿದ ಗೊಡ್ಡು ಹಸುಗಳನ್ನು ಕೂಡ ತ್ಯಜಿಸುತ್ತಿದ್ದಾರೆ. ಇದು ಸಮಸ್ಯೆಗೆ ಮೂಲ ಕಾರಣ ಎಂದು ತಿಳಿಸಿದ್ದಾರೆ.

- Advertisement -


ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸಮಾಜದಲ್ಲಿನ ನೆಲದ ವಾಸ್ತವತೆಯನ್ನು ಪರಿಗಣಿಸದೆ ಸರಕಾರ ಗೋಹತ್ಯೆ ತಡೆ ಕಾಯ್ದೆಯನ್ನು ಜಾರಿಗೊಳಿಸಿದೆ. “ರಾಜ್ಯಾದ್ಯಂತ ಈ ವಿಷಯದ ಬಗ್ಗೆ ನಮಗೆ ದೂರುಗಳು ಬಂದಿವೆ. ರೈತರೇ ಈ ಕಾಯ್ದೆಯ ನಿಜವಾದ ಸಂತ್ರಸ್ತರು. ಅವರು ಈ ಜಾನುವಾರುಗಳನ್ನು ಮಾರಾಟ ಮಾಡುವ ಮೂಲಕ ಸ್ವಲ್ಪ ಹಣವನ್ನು ಗಳಿಸುತ್ತಿದ್ದರು, ಆದರೆ ಈಗ ಈ ಕಾನೂನು ಎಲ್ಲಾ ರೀತಿಯ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ನ ಸ್ಥಳೀಯ ಶಾಸಕ ಎಸ್ ಆರ್ ಮಹೇಶ್ ಅವರನ್ನು ಸಂಪರ್ಕಿಸಿದಾಗ, ತಮ್ಮ ತೋಟದಲ್ಲಿ ಬಿಡಾಡಿ ಕರುಗಳಿಗೆ ಪುನರ್ವಸತಿ ಕಲ್ಪಿಸುವುದಾಗಿ ತಿಳಿಸಿದ್ದಾರೆ. ”ನನ್ನ ತೋಟದಲ್ಲಿ ಈಗಾಗಲೇ 20-25 ಬಿಡಾಡಿ ದನಗಳನ್ನು ಸಾಕಲಾಗುತ್ತಿದೆ. ಈ ದಾರಿ ತಪ್ಪಿದ ಕರುಗಳನ್ನು ರಕ್ಷಿಸಲು ವಾಹನ ಕಳುಹಿಸುತ್ತೇನೆ,” ಎಂದು ತಿಳಿಸಿದ್ದಾರೆ.



Join Whatsapp