ಹೊಸದಿಲ್ಲಿ: ಕೇಂದ್ರದ ಹೊಸ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ಹಲವು ರೈತ ಸಂಘಟನೆಗಳು ನವೆಂಬರ್ 5ರಂದು ರಾಷ್ಟ್ರವ್ಯಾಪಿ ರಸ್ತೆ ತಡೆಗಳನ್ನು ನಡೆಸುವುದಾಗಿ ಪ್ರಕಟಿಸಿವೆ.
ರೈತ ವಿರೋಧಿ ಮತ್ತು ಜನವಿರೋಧಿ ಮೂರು ಮಸೂದೆಗಳು ಹಾಗೂ ಕೇಂದ್ರದ ಪ್ರಸ್ತಾಪಿತ ವಿದ್ಯುತ್ (ತಿದ್ದುಪಡಿ) ಮಸೂದೆ 2020”ರ ವಿರುದ್ಧದ ಹೋರಾಟದ ನೇತೃತ್ವ ವಹಿಸುವ ವಿಷಯದಲ್ಲಿ ಹಲವು ರೈತ ಸಂಘಟನೆಗಳ ಮಧ್ಯೆ ಸಂಪೂರ್ಣ ಸಂಯೋಜನೆಯಿರಬೇಕೆಂದು ಹೊಸದಿಲ್ಲಿಯಲ್ಲಿ ನಡೆದ ಸಭೆಯು ನಿರ್ಣಯಿಸಿದೆ.
500 ಘಟಕ ಸಂಘಟನೆಗಳನ್ನು ಹೊಂದಿರುವ ಪ್ರಮುಖ ರೈತ ಒಕ್ಕೂಟಗಳು, ಅಖಿಲ ಭಾರತ ಕಿಸಾನ್ ಸಂಘರ್ಷ್ ಕೊಆರ್ಡಿನೇಶನ್ ಕಮಿಟಿ (ಎ.ಐ.ಕೆ.ಎಸ್.ಸಿ.ಸಿ) ಮತ್ತು ಬಲಬೀರ್ ಸಿಂಗ್ ರಾಜೆವಾಲ್ ನೇತೃತ್ವದ ಬಿಕೆಯು (ರಾಜೆವಾಲ್) ಮತ್ತು ಹರಿಯಾಣದ ಬಿಕೆಯು ಮುಖ್ಯಸ್ಥ ಗುರುನಾಮ್ ಸಿಂಗ್ ದಿಲ್ಲಿಯಲ್ಲಿ ಸಭೆ ಸೇರಿದ್ದು, ಅಲ್ಲಿ ವಿವಿಧ ವಿಷಯಗಳ ಮೇಲೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎ.ಐ.ಕೆ.ಎಸ್.ಸಿ.ಸಿ ಬಿಡುಗಡೆಗೊಳಿಸಿದ ಹೇಳಿಕೆಯು ತಿಳಿಸಿದೆ.
ಹೇಳಿಕೆಯ ಪ್ರಕಾರ ನವೆಂಬರ್ 5 ರಂದು ಅಖಿಲ ಭಾರತ ಮಟ್ಟದಲ್ಲಿ ರಸ್ತೆ ತಡೆ ನಡೆಸಲಾಗುವುದು. ಹೊಸದಾಗಿ ಅಸ್ತಿತ್ವಕ್ಕೆ ತರಲಾದ ಕಾರ್ಯಕ್ರಮ ಸಂಯೋಜಕ ಮಂಡಳಿಯು ಪ್ರತಿಭಟನೆಯ ನೇತೃತ್ವ ವಹಿಸಲಿದೆ. ದೇಶದಾದ್ಯಂತ ಸರಕಾರಿ ಕಚೇರಿಗಳು, ಬಿಜೆಪಿ ನಾಯಕರ ಕಚೇರಿಗಳು, ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಕಚೇರಿಗಳು, ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಕಚೇರಿಗಳ ಸಮೀಪ ಪ್ರತಿಭಟನೆಗಳನ್ನು ನಡೆಸಲು ರೈತರು ನಿರ್ಧರಿಸಿದ್ದಾರೆ