ಕರ್ನಾಲ್: ಕಳೆದು ತಿಂಗಳು ಐ.ಎ.ಎಸ್ ಅಧಿಕಾರಿ ಆಯುಷ್ ಸಿನ್ಹಾ ಅವರು “ರೈತರ ತಲೆ ಒಡೆಯಿರಿ” ಎಂಬ ವಿವಾದಾತ್ಮಕ ಹೇಳಿಕೆಯಿಂದ ಆಕ್ರೋಶಿತರಾದ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರ ಗೊಳಿಸಿ ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತು ಮಾಡುವಂತೆ ಒತ್ತಾಯಿಸಿದ್ದರು.
ಮಾತ್ರವಲ್ಲ ತೀವ್ರ ರೀತಿಯ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕರ್ನಾಲ್ ಸರ್ಕಾರಿ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ್ದರು. ಈ ಸಂಬಂಧ ರೈತರನ್ನು ಚದುರಿಸುವ ನಿಟ್ಟಿನಲ್ಲಿ ಅವರ ಮೇಲೆ ಪೊಲೀಸರು ಲಾಠಿಚಾರ್ಜ್ ಮತ್ತು ಜಲಫಿರಂಗಿ ಪ್ರಯೋಗಿಸಿದರು. ಇದರಿಂದಾಗಿ ಹಲವಾರು ರೈತರು ಗಾಯಗೊಂಡಿದ್ದರು.
ಸರ್ಕಾರ ಮತ್ತು ಹರ್ಯಾಣದ ರೈತರ ನಡುವೆ ಹಲವಾರು ಸುತ್ತಿನ ಮಾತುಕತೆಯ ಹೊರತಾಗಿಯೂ ರೈತರು ತಮ್ಮ ಪಟ್ಟನ್ನು ಬಿಗಿಗೊಳಿಸಿದ್ದರು.
ಈ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ ವಾರಗಳ ಕಾಲ ನಡೆದ ಪ್ರತಿಭಟನೆ ಮತ್ತು ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಈ ನಿಟ್ಟಿನಲ್ಲಿ ಮಾಜಿ ನ್ಯಾಯಾಧೀಶರು ಎರಡೂ ಕಡೆಯವರನ್ನು ಮಾತುಕತೆಗೆ ಆಹ್ವಾನಿಸಿ, ಐ.ಎ.ಎಸ್ ಅಧಿಕಾರಿಯನ್ನು ಒಂದು ತಿಂಗಳ ರಜೆಯಲ್ಲಿ ಕಳುಹಿಸಿ ಪ್ರಕರಣವನ್ನು ತನಿಖೆಗೆ ನಡೆಸುವಂತೆ ಸೂಚಿಸಿದರು. ಈ ತೀರ್ಮಾನಕ್ಕೆ ಉಭಯ ಕಡೆಯವರು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಗಂಭೀರ ಪ್ರಕರಣವೊಂದು ಸುಖಾಂತ್ಯಗೊಂಡಿದೆ.