ಹೊಸದಿಲ್ಲಿ : ದೆಹಲಿಗೆ ಪ್ರವೇಶಿಸದಂತೆ ಗಾಝಿಪುರ್ ಗಡಿಯಲ್ಲಿ ಪೊಲೀಸರು ಅಳವಡಿಸಿದ್ದ ಮೊಳೆಗಳ ಎದುರು ರೈತರು ಹೂವುಗಳನ್ನಿಟ್ಟು ರಸ್ತೆಯಲ್ಲಿ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ. ರಸ್ತೆಯಲ್ಲಿ ನಿರ್ಮಿಸಲಾದ ಬ್ಯಾರಿಕೇಡ್‌ಗಳು ಮತ್ತು ಸಿಮೆಂಟ್ ಗೋಡೆಗಳಿಗೆ ಇದು ಪ್ರತಿಕ್ರಿಯೆಯಾಗಿದೆ ಎಂದು ರೈತರು ಹೇಳಿದ್ದಾರೆ.
‘ಪೊಲೀಸರು ರೈತರಿಗಾಗಿ ಕಬ್ಬಿಣದ ಮೊಳೆಗಳನ್ನು ಅಳವಡಿಸಿದ್ದಾರೆ. ನಾವು ಅವರಿಗೆ ಹೂವುಗಳನ್ನು ನೀಡಲು ನಿರ್ಧರಿಸಿದ್ದೇವೆ’ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಪ್ರತಿಕ್ರಿಯಿಸಿದ್ದಾರೆ. ಇದಲ್ಲದೆ ಮುಚ್ಚಲ್ಪಟ್ಟಿರುವ ದೆಹಲಿ-ಮೀರತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಮಿಯನ್ನು ಅಗೆದು ಕೃಷಿ ಮಾಡಲು ರೈತರು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ನಿನ್ನೆ ಎರಡು ಲೋಡ್ ಮಣ್ಣನ್ನು ರಸ್ತೆಗೆ ಸುರಿಯಲಾಗಿದೆ. ರಾಕೇಶ್ ಟಿಕಾಯತ್ ಮತ್ತು ಅವರ ತಂಡವು ಮಣ್ಣನ್ನು ಮುಟ್ಟಿ ನಮಸ್ಕರಿಸಿದ ನಂತರ ಮಣ್ಣನ್ನು ರಸ್ತೆಯ ಮೇಲೆ ಹರಡಲಾಗಿದೆ. ದೆಹಲಿ-ಡಾಬರ್ ತಿರಹಾ ರಸ್ತೆಯಲ್ಲಿ ಹೂದೋಟ ಗಳನ್ನು ನೆಡಲು ರೈತರು ಯೋಜಿಸಿದ್ದಾರೆ.