ಪೊಲೀಸರು, ಅಧಿಕಾರಿಗಳ ಸಮ್ಮುಖದಲ್ಲೇ ರೈತನ ಗುಂಡಿಕ್ಕಿ ಹತ್ಯೆಗೈದ ಬಿಜೆಪಿ ಮುಖಂಡ

ಲಖನೌ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರದ ಆಡಳಿತದಲ್ಲಿ ಕ್ರಿಮಿನಲ್ ಗಳಿಗೆ ಕಾನೂನು ಸುವ್ಯವಸ್ಥೆಯ ಭಯವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಇನ್ನೊಂದು ಪ್ರಕರಣ ಸೇರ್ಪಡೆಯಾಗಿದೆ. ಅಲ್ಲಿನ ಬಲ್ಲಿಯಾ ಜಿಲ್ಲೆಯ ದುರ್ಜನ್ ಪುರ ಗ್ರಾಮದಲ್ಲಿ ಪೊಲೀಸ್ ಅಧಿಕಾರಿಗಳು, ಆಡಳಿತಾಧಿಕಾರಿಗಳ ಸಮ್ಮುಖದಲ್ಲೇ ಬಿಜೆಪಿ ಮುಖಂಡನೊಬ್ಬ 45ರ ಹರೆಯದ ರೈತರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ. ರೇಷನ್ ಅಂಗಡಿ ಮಂಜೂರಾತಿ ಪ್ರಕ್ರಿಯೆ ಸಂದರ್ಭ ಉಂಟಾದ ಗಲಾಟೆಯ ವೇಳೆ ಈ ಘಟನೆ ನಡೆದಿದೆ. ಹಾಡಹಗಲೇ, ಸಾರ್ವಜನಿಕರ ಸಮ್ಮುಖದಲ್ಲೇ ಹತ್ಯೆ ನಡೆದಿರುವುದು ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ.

ರೇಷನ್ ಅಂಗಡಿ ಮಂಜೂರಾತಿ ವಿಚಾರದಲ್ಲಿ ನಡೆದ ಘರ್ಷಣೆಯ ವೇಳೆ ರೈತ ಜಯ್ ಪ್ರಕಾಶ್ ಎಂಬವರಿಗೆ ಬಿಜೆಪಿ ಬೆಂಬಲಿಗನೆನ್ನಲಾದ ಧೀರೇಂದ್ರ ಪ್ರತಾಪ್ ಸಿಂಗ್ ಗುಂಡಿಕ್ಕಿದ್ದಾನೆ. ಧೀರೇಂದ್ರ ಸಿಂಗ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇತರ ಏಳು ಮಂದಿ ವಿರುದ್ಧ ಕ್ರಿಮಿನಲ್ ಸಂಚು ಪ್ರಕರಣ ದಾಖಲಾಗಿದೆ. ಯಾರೊಬ್ಬರನ್ನೂ ಬಂಧಿಸಲಾಗಿಲ್ಲ.

- Advertisement -

ದುರ್ಜನ್ ಪುರ ಗ್ರಾಮದ ಎರಡು ಸ್ವಸಹಾಯ ಸಂಘಗಳ ನಡುವೆ ರೇಷನ್ ಅಂಗಡಿ ಮಂಜೂರಾತಿ ವಿಚಾರದಲ್ಲಿ ವಾಗ್ವಾದ ಆರಂಭವಾಗಿತ್ತು. ಎರಡು ಗುಂಪುಗಳಲ್ಲಿ ಒಂದು ಗುಂಪು ಧೀರೇಂದ್ರ ಸಿಂಗ್ ನೇತೃತ್ವದ್ದಾಗಿದೆ. ಎರಡೂ ಗುಂಪುಗಳು ಘರ್ಷಣೆ ನಿಲ್ಲಿಸದಿದ್ದಾಗ, ಮಂಜೂರಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದರು. ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸುರೇಶ್ ಕುಮಾರ್ ಪಾಲ್, ಮಂಜೂರಾತಿ ಪ್ರಕ್ರಿಯೆ ಸ್ಥಗಿತಗೊಳಿಸಿ, ಗ್ರಾಮಸ್ಥರನ್ನು ಮನೆಗಳಿಗೆ ಹಿಂದಿರುಗುವುಂತೆ ಸೂಚಿಸಿದ್ದರು. ಈ ವೇಳೆ ಧೀರೇಂದ್ರ ಸಿಂಗ್, ಗುಂಡಿನ ದಾಳಿ ನಡೆಸಿದ್ದು, ಜಯ್ ಪ್ರಕಾಶ್ ಗಾಯಗೊಂಡಿದ್ದರು. ಆಸ್ಪತ್ರೆ ಸಾಗಿಸುವ ವೇಳೆ ಅವರು ಕೊನೆಯುಸಿರೆಳೆದರು ಎಂದು ಬಲ್ಲಿಯಾ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ನಾಥ್ ಹೇಳಿದ್ದಾರೆ.

ಆರೋಪಿ ಧೀರೇಂದ್ರ ಸಿಂಗ್ ಸ್ಥಳೀಯ ಬಿಜೆಪಿ ಮುಖಂಡ ಎನ್ನಲಾಗಿದೆ. ಆದರೆ, ಬಲ್ಲಿಯಾ ಬಿಜೆಪಿ ಜಿಲ್ಲಾಧ್ಯಕ್ಷ ಇದನ್ನು ನಿರಾಕರಿಸಿದ್ದು, ಆತ ಬಿಜೆಪಿ ಬೆಂಬಲಿಗ ಇರಬಹುದು ಎಂದಿದ್ದಾರೆ. ಬೈರಿಯಾ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ಆರೋಪಿ ಧೀರೇಂದ್ರ ಸಿಂಗ್ ಬಿಜೆಪಿ ಬೆಂಬಲಿಗ ಎಂಬುದನ್ನು ಒಪ್ಪಿದ್ದಾರೆ.

ಘಟನೆಗೆ ಸಂಬಂಧಿಸಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸುರೇಶ್ ಕುಮಾರ್ ಪಾಲ್, ಸರ್ಕಲ್ ಅಧಿಕಾರಿ ಚಂದ್ರಕೇಶ್ ಸಿಂಗ್ ಸಹಿತ ಘಟನಾ ಸ್ಥಳದಲ್ಲಿದ್ದ ಎಲ್ಲ ಪೊಲೀಸ್ ಹಾಗೂ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

- Advertisement -