ಫರಂಗಿಪೇಟೆ: ಖಾಸಗಿ ಬಸ್ಸೊಂದು ರಸ್ತೆಗೆ ಪಲ್ಟಿಯಾದ ಘಟನೆ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಹತ್ತನೇ ಮೈಲಿ ಕಲ್ಲು ಬಳಿ ನಡೆದಿದೆ.
ಘಟನೆ ಸಂಬಂಧ ಐವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ನಿನ್ನೆ ರಾತ್ರಿ ಹೊರಟಿದ್ದ ಬಸ್ ಫರಂಗಿಪೇಟೆ ಬಳಿ ಇಂದು ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ, ಚಾಲಕನ ಅತಿ ವೇಗದ ಚಾಲನೆ ಅಥವಾ ವಾಹನದಲ್ಲಿ ಕಂಡ ತಾಂತ್ರಿಕ ದೋಷಗಳಿಂದ ಅಪಘಾತ ಸಂಭವಿಸಿಬಹುದು ಎಂಬುದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಘಟನೆಯಿಂದ ಗಾಯಗೊಂಡವರ ಹೆಸರು ವಿಳಾಸದ ಮಾಹಿತಿ ಯಾವುದೇ ಲಭ್ಯವಾಗಿಲ್ಲ. ಗಾಯಗೊಂಡ ಎಲ್ಲರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಯುವಕರು ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೋಲೀಸರು ಭೇಟಿ ನೀಡಿದ್ದಾರೆ.