ಫರಂಗಿಪೇಟೆ: ರಸ್ತೆ ಬದಿ ತ್ಯಾಜ್ಯಮಣ್ಣು ಹಾಕಿದ ಟಿಪ್ಪರ್ ಚಾಲಕ

Prasthutha|

- Advertisement -

ಬಂಟ್ವಾಳ : ಫರಂಗಿಪೇಟೆ ಸಮೀಪದ ಹತ್ತನೇ ಮೈಲುಗಲ್ಲು ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿ ಟಿಪ್ಪರ್ ಲಾರಿಯಲ್ಲಿ ತ್ಯಾಜ್ಯ ಮಿಶ್ರಿತ ಮಣ್ಣು ತಂದು ಹಾಕುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರು ಅದೇ ಲಾರಿಯಲ್ಲಿ ತ್ಯಾಜ್ಯವನ್ನು ತೆರವು ಮಾಡಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ತುಂಬೆ ಕಡೆಯಿಂದ ಟಿಪ್ಪರ್ ಲಾರಿಯಲ್ಲಿ ತ್ಯಾಜ್ಯ ಮಿಶ್ರಿತ ಮಣ್ಣು ತಂದು ರಸ್ತೆ ಬದಿ ಹಾಕುತ್ತಿರುವುದನ್ನು ಗಮನಿಸಿದ ಗ್ರಾಪಂ ಸದಸ್ಯ ಇಕ್ಬಲ್ ಸುಜೀರ್ ಅವರು ಲಾರಿಯನ್ನು ನಿಲ್ಲಿಸಿ ಕೂಡಲೇ ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರಿಗೆ ಮಾಹಿತಿ ನೀಡಿದ್ದಾರೆ.

- Advertisement -

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಕೂಡಲೇ ತ್ಯಾಜ್ಯವನ್ನು ತೆರವುಗೊಳಿಸುವಂತೆ ಟಿಪ್ಪರ್ ಚಾಲಕನಿಗೆ ಸೂಚಿಸಿದರು. ಈ ವೇಳೆಗೆ ಸುಮಾರು 5ರಿಂದ 6 ಲೋಡ್ ತ್ಯಾಜ್ಯ ಹಾಕಲಾಗಿತ್ತು. ಟಿಪ್ಪರ್ ಚಾಲಕ ಸಂಬಂಧಿಸಿದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ಅದರಂತೆ ಜೆಸಿಬಿಯೊಂದಿಗೆ ಬಂದ ಅವರು ರಸ್ತೆ ಬದಿಯಿಂದ ತ್ಯಾಜ್ಯಮಣ್ಣು ಅದೇ ಲಾರಿಯಲ್ಲಿ ತೆರವು ಮಾಡಿದರು.

ತ್ಯಾಜ್ಯಮಣ್ಣು ತೆರವುಗೊಳಿಸುವವರಿಗೆ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸದಸ್ಯರಾದ ಇಕ್ಬಾಲ್ ಸುಜೀರ್, ಹುಸೈಲ್ ಪಾಡಿ, ಅಖ್ತರ್ ಹುಸೈನ್, ಸಿಬ್ಬಂದಿ ಸಲಾಂ, ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಹಾಗೂ ಸ್ಥಳೀಯ ನಾಗರಿಕರು ಸ್ಥಳದಲ್ಲಿದ್ದರು.

ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ, ರಸ್ತೆ ಬದಿಯಲ್ಲಿ ಹೊರ ಊರಿನ ಜನರು ಕಸ ಹಾಗೂ ತ್ಯಾಜ್ಯಮಣ್ಣನ್ನು ತಂದು ರಾಶಿ ಹಾಕುತ್ತಿದ್ದು ಇಂತವರ ವಿರುದ್ಧ ಗ್ರಾಮ ಪಂಚಾಯತ್ ಆಡಳಿತ ಕಾರ್ಯಾಚರಣೆ ನಡೆಸುತ್ತಿದೆ. ಕೆಲವು ಸಮಯದ ಹಿಂದೆ ಇದೇ ಜಾಗದಲ್ಲಿ ತ್ಯಾಜ್ಯ ಎಸೆದ ಮಾರುತಿ ಓಮ್ನಿ ಕಾರಿನ ಮಾಲಕನಿಂದ ಗ್ರಾಪಂ 3 ಸಾವಿರ ರೂ.‌ ದಂಡ ವಸೂಲಿ ಮಾಡಿದೆ.

ಈ ವೇಳೆ ಮಾತನಾಡಿದ ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾಪಂನಿಂದ ಎರಡು ಪಿಕಪ್ ಪ್ರತೀ ದಿನ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಗ್ರಾಮದ ವಿವಿಧ ಭಾಗದಲ್ಲಿ ತ್ಯಾಜ್ಯ ತಂದು ಎಸೆಯುವ ಹೊರಗಿನವರ ಮೇಲೆ ನಿಗಾ ಇಡಲು ಗ್ರಾಮಸ್ಥರಿಗೆ ಮನವಿ ಮಾಡಿದ್ದೇವೆ. ತ್ಯಾಜ್ಯ ಎಸೆದವರಿಗೆ ಈಗಾಗಲೇ ದಂಡವನ್ನು ವಿಧಿಸಿದ್ದೇವೆ. ಇಂದು ಲಾರಿಯಲ್ಲಿ ತ್ಯಾಜ್ಯ ತಂದು ಹಾಕುತ್ತಿರುವುದನ್ನು ಗಮನಿಸಿದ ಸದಸ್ಯ ಇಕ್ಬಾಲ್ ಸುಜೀರ್ ಅವರ ಮಾಹಿತಿಯಂತೆ ಅದೇ ಲಾರಿಯಲ್ಲಿ ತ್ಯಾಜ್ಯವನ್ನು ತೆರವು ಮಾಡಿದ್ದೇವೆ. ತ್ಯಾಜ್ಯ ಎಸೆಯುವ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಗ್ರಾಪಂ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶೀಘ್ರದಲ್ಲೇ ಸಿಸಿ ಕೆಮರಾ ಅಳವಡಿಸಲಾಗುವುದು ಎಂದು ಹೇಳಿದರು.

ಸ್ಥಳೀಯರಿಂದ ಲಾರಿ ಚಾಲಕನಿಗೆ ತರಾಟೆ: ರಸ್ತೆ ಬದಿ ತ್ಯಾಜ್ಯ ಹಾಕುತ್ತಿದ್ದ ಟಿಪ್ಪರ್ ಚಾಲಕನನ್ನು ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಗ್ರಾಮದ ಸ್ವಚ್ಛತೆಗೆ ಗ್ರಾಪಂ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದು ಇಡೀ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುತ್ತಿದೆ. ನೀವು ಹೊರಗಿನಿಂದ ತ್ಯಾಜ್ಯ ತಂದು ಇಲ್ಲಿ ಎಸೆಯುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.



Join Whatsapp