ಸುಳ್ಯ: ಹಿರಿಯ ಸಾಹಿತಿ, ವಿದ್ವಾನ್ ಟಿ.ಜಿ.ಮುಡೂರು ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಅಧ್ಯಾಪಕ, ಕವಿ , ವಿದ್ವಾಂಸರಾಗಿ ಕನ್ನಡ, ತುಳು ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು, ಹೃದಯರೂಪಕ ‘ ಎಂಬ ಆಂಗ್ಲ ನಾಟಕದ ರೂಪಾಂತರ ಕೃತಿಯನ್ನೂ ಪ್ರಕಟಿಸಿದ್ದಾರೆ.
ಮದರಾಸು ವಿಶ್ವವಿದ್ಯಾನಿಲಯದಿಂದ ಕನ್ನಡ ವಿದ್ವಾನ್ ಹಾಗೂ ಮೈಸೂರು ಎಂ.ಎ ಹಾಗೂ ಬಿ.ಎಡ್ ಗಳಿಸಿದ ಇವರು 1964 ರಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ದುಡಿದು ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಲ್ಲಿ ಸುಳ್ಯ ತಾಲೂಕಿನ ಪ್ರತಿನಿಧಿಯಾಗಿ 15 ವರ್ಷಗಳ ಕಾಲ, ಹಾಗೂ ಸುಳ್ಯ ಘಟಕವಾದಾಗ ತಾಲೂಕು ಕ.ಸಾ.ಪ. ಅಧ್ಯಕ್ಷರಾಗಿ 3 ವರ್ಷ ಕಾರ್ಯ ನಿರ್ವಹಿಸಿರುವ ಟಿ.ಜಿ.ಮುಡೂರು 1997 ರಲ್ಲಿ ಅರಂತೋಡಿನಲ್ಲಿ ನಡೆದ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
ತಾಲೂಕು ರಾಜ್ಯೋತ್ಸವ ಪ್ರಶಸ್ತಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಸುಬ್ಬಪ್ಪ ಗೌಡ ಹಾಗೂ ಬಾಲಕ್ಕ ದಂಪತಿ ಪುತ್ರನಾಗಿ 1927 ನವೆಂಬರ್ 24 ರಂದು ಜನಿಸಿದ ಟಿ.ಜಿ.ಮುಡೂರು, 1948 ರಿಂದ ಪ್ರಾಥಮಿಕ , ಪ್ರೌಢಶಾಲೆಗಳಲ್ಲಿ ದುಡಿದು ನಂತರ ಉಪನ್ಯಾಸಕ ರಾಗಿ ಕೆಲಸ ನಿರ್ವಹಿಸಿ 1982 ರಲ್ಲಿ ನಿವೃತ್ತರಾದರು.
ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.