ಸಂತ್ರಸ್ತ ಕುಟುಂಬಕ್ಕೆ ಕೇರಳದಲ್ಲಿ ಅದ್ಧೂರಿ ಸ್ವಾಗತ
ಚೆನ್ನೈ: ಉತ್ತರ ಪ್ರದೇಶದ ಜೈಲಿನಲ್ಲಿರುವ ತಮ್ಮ ಮಕ್ಕಳನ್ನು ಭೇಟಿಯಾಗಲು ತೆರಳಿದ್ದಾಗ ಉತ್ತರ ಪ್ರದೇಶ ಪೊಲೀಸರಿಂದ ಬಂಧಿತರಾಗಿದ್ದ ಕುಟುಂಬದ ಸದಸ್ಯರು 36 ದಿನಗಳ ಬಳಿಕ ಸೋಮವಾರ ಬಿಡುಗಡೆಯಾಗಿ ಕೇರಳ ತಲುಪಿದ್ದಾರೆ.
ಇತ್ತೀಚೆಗೆ ರೈಲಿನಲ್ಲಿ ಹೋಗುತ್ತಿದ್ದಾಗ ಉತ್ತರ ಪ್ರದೇಶದ ಪೊಲೀಸರು ಕೇರಳ ನಿವಾಸಿಗಳಾದ ಫಿರೋಝ್ ಮತ್ತು ಅನ್ಶಾದ್ ಎಂಬಿಬ್ಬರನ್ನು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಿದ್ದರು. ಮಕ್ಕಳ ಬಂಧನದ ಸುದ್ದಿ ತಿಳಿದ ತಕ್ಷಣ ಅವರ ಕುಟುಂಬದ ನಾಲ್ವರು ಸದಸ್ಯರು ಮಕ್ಕಳನ್ನು ನೋಡಲು ಉತ್ತರ ಪ್ರದೇಶಕ್ಕೆ ತೆರಳಿದ್ದರು.
ಆದರೆ ಮಕ್ಕಳನ್ನು ನೋಡಲು ಅವಕಾಶ ನೀಡದ ಅಲ್ಲಿನ ಪೊಲೀಸರು, ಆರ್ ಟಿಪಿಸಿಆರ್ ವರದಿಯ ಅವಧಿ ಮುಗಿದಿದೆ ಎಂಬ ನೆಪದಲ್ಲಿ ಇಡೀ ಕುಟುಂಬವನ್ನು ಬಂಧಿಸಿ ಜೈಲಿಗಟ್ಟಿದ್ದರು. ಮಹಿಳೆಯರು, ಮಕ್ಕಳು ಇದ್ದ ಈ ಎರಡು ಕುಟುಂಬ ಸುಮಾರು 36 ದಿನಗಳ ಕಾಲ ಜೈಲಿನಲ್ಲಿ ಕಳೆಯಬೇಕಾಯಿತು.
ಸಂತ್ರಸ್ತ ಕುಟುಂಬ ಸೋಮವಾರ ಎರ್ನಾಕುಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ನ್ಯಾಷನಲ್ ವುಮೆನ್ಸ್ ಫ್ರಂಟ್ ಸದಸ್ಯರು ಅದ್ಧೂರಿ ಸ್ವಾಗತ ನೀಡಿ, ಬರಮಾಡಿಕೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತ ಕುಟುಂಬದ ಸದಸ್ಯರು, ಮಕ್ಕಳನ್ನು ಸುಳ್ಳು ಆರೋಪದಲ್ಲಿ ಬಂಧಿಸಲಾಗಿತ್ತು. ಅವರನ್ನು ಭೇಟಿಯಾಗಲು ಉತ್ತರ ಪ್ರದೇಶಕ್ಕೆ ಹೋಗಿದ್ದಾಗ ನಮ್ಮನ್ನು ಕೂಡ ಬಂಧಿಸಲಾಯಿತು. ನಮ್ಮ ಮಕ್ಕಳನ್ನು ಕೂಡ ಸುಳ್ಳು ಕೇಸಿನಲ್ಲಿ ಬಂಧಿಸಲಾಗಿದೆ ಎಂಬುದು ನಮಗೆ ಈಗ ಸ್ಪಷ್ಟವಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಯೋಗಿ ಸರಕಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಿ ಜೈಲಿನಿಂದ ಬಿಡುಗಡೆಯಾಗಿದ್ದೇವೆ. ಉತ್ತರ ಪ್ರದೇಶದಲ್ಲಿ ಯಾವ ರೀತಿಯ ಆಡಳಿತ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸುಳ್ಳು ಆರೋಪದಲ್ಲಿ ಬಂಧಿತರಾಗಿರುವ ನಮ್ಮ ಮಕ್ಕಳ ವಿಷಯದಲ್ಲೂ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.