ಚೆನ್ಬೈ: ತನ್ನ ಕುರಿತು ಸುಳ್ಳು ಹೇಳಿಕೆ ನೀಡಿದ್ದಾರೆ ಹಾಗೂ ನ್ಯಾಯಾಲಯವನ್ನು ನಿಂದಿಸಿದ್ದಾರೆ ಎಂದು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ದಾಖಲಿಸಿದ್ದ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಜಿ.ಸಂಪತ್‌ಕುಮಾರ್‌ಗೆ ಮದ್ರಾಸ್ ಹೈಕೋರ್ಟ್ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ ತನ್ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಂಪತ್ ಕುಮಾರ್ ಅವರಿಗೆ ಅನುಕೂಲವಾಗಲು ತೀರ್ಪನ್ನು 30 ದಿನಗಳ ಕಾಲ ಹೈಕೋರ್ಟ್ ಅಮಾನತಿನಲ್ಲಿಟ್ಟಿದೆ.
ತೀರ್ಪನ್ನು ಅಮಾನತಿನಲ್ಲಿಡುವಂತೆ ಸಂಪತ್‌ಕುಮಾರ್ ಮನವಿ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ನ್ಯಾಯಮೂರ್ತಿಗಳಾದ ಎಸ್.ಎಸ್.ಸುಂದರ್ ಹಾಗೂ ಸುಂದರಮೋಹನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿದೆ.
2013ರ ಐಪಿಎಲ್ ಬೆಟ್ಟಿಂಗ್ ಹಗರಣಕ್ಕೂ ಎಂಎಸ್ ಧೋನಿಗೂ ನಂಟಿದೆ ಎಂಬುದಾಗಿ ಸಂಪತ್‌ಕುಮಾರ್ ಹೇಳಿಕೆ ನೀಡಿದ್ದರು. ಇದಕ್ಕಾಗಿ ಅವರ ವಿರುದ್ಧ ಧೋನಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸುವ ವೇಳೆ, ಸಂಪತ್‌ಕುಮಾರ್ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ವಿರುದ್ಧ ಅವಹೇಳನಕಾರಿ ಆರೋಪಗಳನ್ನು ಮಾಡಿದ್ದರು ಎಂದು ದೂರಿದ್ದ ಧೋನಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.