ಅಫಿಡವಿತ್ ನಲ್ಲಿ ಸುಳ್ಳು ಮಾಹಿತಿ: ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಗೆ ವಿಧಿಸಿರುವ ಶಿಕ್ಷೆ ಹೆಚ್ಚಿಸಲು ಕೋರಿ ಮೇಲ್ಮನವಿ; ನೋಟಿಸ್ ಜಾರಿ

Prasthutha|

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿಡವಿತ್ ನಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಎರಡು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಜೆಪಿ ಶಾಸಕ ಉದಯ್‌ ಗರುಡಾಚಾರ್‌ ಅವರಿಗೆ ಹೆಚ್ಚಿನ ಶಿಕ್ಷೆ ವಿಧಿಸಬೇಕು ಎಂದು ಕೋರಿರುವ ಮನವಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರತಿವಾದಿ ಉದಯ್‌ ಗುರುಡಾಚಾರ್ ಗೆ ನೋಟಿಸ್‌ ಜಾರಿ ಮಾಡಿದೆ.

- Advertisement -

ದೂರುದಾರ ಎಚ್ ಜಿ ಪ್ರಶಾಂತ್ ಅವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು 110ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ  ಬಿ ಜಯಂತ್‌ ಕುಮಾರ್  ನಡೆಸಿದರು.

ಪ್ರಕರಣದ ವಿಚಾರಣೆ ನಡೆಸಿದ್ದ ನಗರದ 42ನೇ ಎಸಿಎಂಎಂ ನ್ಯಾಯಾಲಯವು (ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಉದಯ್ ಗರುಡಾಚಾರ್ ಅವರಿಗೆ ಎರಡು ತಿಂಗಳು ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು.

- Advertisement -

ಜನಪ್ರತಿನಿಧಿಗಳ ಕಾಯಿದೆಯ ಸೆಕ್ಷನ್ 125(ಎ) ಪ್ರಕಾರ ಆರೋಪ ಸಾಬೀತಾದಾಗ ಗರಿಷ್ಠ 6 ತಿಂಗಳವರೆಗೂ ಶಿಕ್ಷೆ ವಿಧಿಸುವುದಕ್ಕೆ ಅವಕಾಶವಿದೆ. ಆದರೆ, ಎರಡು ತಿಂಗಳ ಶಿಕ್ಷೆ ವಿಧಿಸಲಾಗಿದೆ.  ಅಲ್ಲದೇ, ದಂಡದ ಪ್ರಮಾಣವನ್ನೂ ಹೆಚ್ಚಳ ಮಾಡಬೇಕು ಎಂದು ಮೇಲ್ಮನವಿಯಲ್ಲಿ ದೂರುದಾರರು ಮನವಿ ಮಾಡಿದ್ದಾರೆ.

(ಕೃಪೆ: ಬಾರ್ & ಬೆಂಚ್)



Join Whatsapp