ಬೆಂಗಳೂರು: ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ ಗೆ ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿದ್ದ ಫಕೀರಪ್ಪ ಎಂಬ ವೃದ್ಧ ಪಂಚೆ ಧರಿಸಿದ್ದ ಎಂಬ ಕಾರಣಕ್ಕೆ ಮಾಲ್ ಒಳಗೆ ಬಿಡದೆ ಸಿಬ್ಬಂದಿ ಅವಮಾನ ಮಾಡಿದ್ದರು. ಸದ್ಯ ಈಗ ರೈತ ಫಕೀರಪ್ಪಗೆ ಅವಮಾನ ಮಾಡಿದ್ದ ಮಾಲ್ನಿಂದಲೇ ಸನ್ಮಾನ ಮಾಡಲಾಗಿದೆ.
ರೈತ ಫಕೀರಪ್ಪಗೆ ಶಾಲು ಹಾಕಿ ಸನ್ಮಾನಿಸಲಾಗಿದೆ. ಮಾಲ್ ಇನ್ಚಾರ್ಜ್ ಸುರೇಶ್ ಅವರು ಫಕೀರಪ್ಪಗೆ ಕ್ಷಮೆಯಾಚಿಸಿದ್ದಾರೆ.
ರೈತ ಫಕೀರಪ್ಪ ಪಂಚೆ ಧರಿಸಿ ಮಾಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ರೈತನನ್ನು ಅವಮಾನಿಸಿದಕ್ಕೆ ಕನ್ನಡಪರ ಹೋರಾಟಗಾರರು ಮಾಲ್ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾಲ್ ಇನ್ಚಾರ್ಜ್ ಸುರೇಶ್ ಕ್ಷಮೆ ಕೇಳಿದರೂ ಹೋರಾಟಗಾರರು ಜಗ್ಗಲಿಲ್ಲ. ಮ್ಯಾನೇಜರ್ ಬರಬೇಕು ಎಂದು ಪಟ್ಟು ಹಿಡಿದಿದ್ದರು. ಸದ್ಯ ಈಗ ಮಾಲ್ ಸಿಬ್ಬಂದಿ ತಾವು ಮಾಡಿದ ಎಡವಟ್ಟನ್ನು ಸರಿ ಮಾಡಿಕೊಂಡಿದ್ದು ಪಂಚೆಯಲ್ಲೇ ಬಂದ ರೈತ ಫಕೀರಪ್ಪನಿಗೆ ಮಾಲ್ ಒಳಗೆ ಸನ್ಮಾನ ಮಾಡಿ ಕ್ಷಮೆ ಕೇಳಿದೆ.