ಕಾಂಗ್ರೆಸ್ ಶಾಸಕ ಪ್ರದೀಪ್‌ ಈಶ್ವರ್‌ ಹೆಸರಲ್ಲಿ ನಕಲಿ ರಾಜೀನಾಮೆ ಪತ್ರ ವೈರಲ್

Prasthutha|

ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಿದ್ದಾರೆ ಎಂಬ ನಕಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

- Advertisement -


 ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತವನ್ನು ಡಾ.ಕೆ.ಸುಧಾಕರ್ ಹೆಚ್ಚು ಪಡೆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ‌ಮತ್ತು ಮತದಾನದ ನಂತರವೂ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದು, ಈ ಮಾತುಗಳು ಈಗ ತೀವ್ರ ಟ್ರೋಲ್‌ಗೆ ಗುರಿಯಾಗಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ‘ಪ್ರದೀಪ್ ರಾಜೀನಾಮೆ ಯಾವಾಗ’ ಎಂದು ಪ್ರಶ್ನಿಸುತ್ತಿದ್ದಾರೆ. 


ಈ ನಡುವೆ ನಕಲಿ ರಾಜೀನಾಮೆ ಪತ್ರ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಪತ್ರವು ಅಸಲಿಯೊ ನಕಲಿಯೊ ಎನ್ನುವ ಬಗ್ಗೆ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಚರ್ಚೆಗಳು ಸಹ ನಡೆದವು.

- Advertisement -


ಶಾಸಕ ಪ್ರದೀಪ್‌ ಈಶ್ವರ್‌ಅವರ ಆಪ್ತ ಸಹಾಯಕರೊಬ್ಬರು ಈ ಕುರಿತು ಸ್ಪಷ್ಟನೆ ನೀಡಿದ್ದು, ಶಾಸಕ ಪ್ರದೀಪ್‌ ಈಶ್ವರ್‌ ಹೆಸರಿನಲ್ಲಿ ಹರಿದಾಡುತ್ತಿರುವ ರಾಜೀನಾಮೆ ಪತ್ರ ನಕಲಿ ಎಂದು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ಸಚಿವ ಕೆ.ಸುಧಾಕರ್ ಕಾಂಗ್ರೆಸ್‌ ಅಭ್ಯರ್ಥಿ ಎಂ.ಎಸ್.ರಕ್ಷಾರಾಮಯ್ಯ ವಿರುದ್ದ 1,62,099 ಮತಗಳ ಗೆಲುವು ಸಾಧಿಸಿದ್ದಾರೆ.


ಪತ್ರದಲ್ಲಿ ಏನಿದೆ: ‘ಬಾಲ್ಯದಿಂದಲೂ ಪುಣ್ಯಕೋಟಿ ಕಥೆಯನ್ನು ಆದರ್ಶವಾಗಿಸಿಕೊಂಡು ‘ಕೊಟ್ಟ ಮಾತು–ಇಟ್ಟ ಹೆಜ್ಜೆ ತಪ್ಪಬಾರದು’ ಅನ್ನೋ ಮಾತನ್ನು ಜೀವನದುದ್ದಕ್ಕೂ ಪಾಲಿಸುತ್ತ ಬಂದವನು ನಾನು. ನಾನು ಕೆಲ ದಿನಗಳ ಹಿಂದೆ ಮಾಜಿ ಸಚಿವರಾದ ಡಾ.ಕೆ.ಸುಧಾಕರ್ ಅವರು ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಒಂದು ಮತವನ್ನು ಲೀಡ್ ತೆಗೆದುಕೊಂಡರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಾರ್ವಜನಿಕವಾಗಿ ಹೇಳಿರುತ್ತೇನೆ. 


ಸುಧಾಕರ್ ಅವರು ಸುಮಾರು 20 ಸಾವಿರ ಮತಗಳನ್ನು ನನ್ನ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿರುವುದರಿಂದ ನಾನು ಆಡಿದ ಮಾತಿಗೆ ಬದ್ಧನಾಗಿ ಸ್ವಿಇಚ್ಛೆಯಿಂದ ನನ್ನ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ’ ಎಂದು ರಾಜೀನಾಮೆ ಪತ್ರದಲ್ಲಿ ಬರೆಯಲಾಗಿದೆ.



Join Whatsapp