► ಸಂಘಪರಿವಾರದ ದ್ವೇಷಕ್ಕೆ ಮರುಗಿ ಸೇವೆ ಸ್ಥಗಿತಗೊಳಿಸಿ ಹೀಗೊಂದು ಫೇಸ್ಬುಕ್ ಪೋಸ್ಟ್ !
ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಆರೆಸ್ಸೆಸ್ ಸಹ ಸಂಘಟನೆಗಳಾದ ಬಜರಂಗದಳ, ವಿಎಚ್ ಪಿ ಸೇರಿದಂತೆ ಸಂಘಪರಿವಾರದ ಸಂಘಟನೆಗಳು ಸಮಾಜದಲ್ಲಿ ನಿರಂತರವಾಗಿ ದ್ವೇಷ ಬಿತ್ತುದ ಕಾರ್ಯದಲ್ಲಿ ನಿರತವಾಗಿವೆ. ಅವು ಹಿಜಾಬ್ ನಿಂದ ಪ್ರಾರಂಭವಾಗಿ, ವ್ಯಾಪಾರ ಬಹಿಷ್ಕಾರ, ಹಲಾಲ್ ವಿಚಾರ ಸೇರಿದಂತೆ ಜನರ ನಡುವೆ ಧರ್ಮದ ಕಂದಕ ನಿರ್ಮಿಸುವ ಕಾರ್ಯ ನಡೆಸುತ್ತಿವೆ. ಹಲವಾರು ಹಿಂದೂಗಳೇ ಸಂಘಪರಿವಾರದ ಈ ವಿಭಜನಾತ್ಮಕ ದ್ವೇಷದ ನಡೆಯನ್ನು ವಿರೋಧಿಸುತ್ತಲೇ ಇದ್ದಾರೆ. ಈ ನಡುವೆ ಇವರ ಕುಕೃತ್ಯಗಳಿಂದ ಭ್ರಮನಿರಸನಗೊಂಡಿರುವ ರಾಜ್ಯದ ಖ್ಯಾತ ಯಕ್ಷಗಾನ ಕಲಾವಿದ ವಾಸುದೇವ ಹೆಗ್ಗಡೆಯವರ ಫೇಸ್ಬುಕ್ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಯಕ್ಷಗಾನ ಕಲೆಯೊಂದಿಗೆ ರಕ್ತದಾನದ ಮೂಲಕ ಸಮಾಜಕ್ಕೆ ತಮ್ಮ ಕೈಲಾಗುವ ಸೇವೆ ಮಾಡುತ್ತಿದ್ದ ಹೆಗ್ಗಡೆಯವರು, “ಇನ್ನು ಮುಂದೆ ರಕ್ತದಾನಿಗಳನ್ನು ಕೇಳಿಕೊಂಡು ನನ್ನ ಸ್ನೇಹಿತರು ಯಾರೂ ಬರಬೇಡಿ. ಯಾಕೆಂದರೆ ನಮ್ಮ ಬಳಿ ಇರುವ 107 ರಕ್ತದಾನಿಗಳಲ್ಲಿ 89 ಮಂದಿ ಮುಸಲ್ಮಾನರಾಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ರಕ್ತಕ್ಕಾಗಿ ಸಹಾಯ ಕೇಳಿಕೊಂಡು ಬರುವಾಗ ಅವರಲ್ಲಿ ನೀವು ಯಾವ ಧರ್ಮದವರು ಎಂದು ನಾನು ಕೇಳಿಲ್ಲ. ಇನ್ನು ನಾನು ಕೇಳಿದಾಗಲೆಲ್ಲಾ ರಕ್ತ ನೀಡುವ ರಕ್ತದಾನಿಗಳು ಕೂಡಾ ನಾವು ಕೊಡುವ ರಕ್ತ ಯಾವ ಧರ್ಮದವರಿಗೆ ಎಂದು ಇದುವರೆಗೂ ಕೇಳಿಲ್ಲ ಎಂದು ವಾಸುದೇವ ಅವರು ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಅವರ ಫೇಸ್ಬುಕ್ ಪೋಸ್ಟ್’ನ ಯಥಾವತ್ ಪಾಠ ಹೀಗಿದೆ : “ವಿಶ್ವಾಸಿ ಗಳೇ, ಆತ್ಮೀಯರೇ, ಮಿತ್ರರೇ, ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಯಾವುದೇ ಕಾರಣಕ್ಕೂ ನಮ್ಮವರೊಬ್ಬರಿಗೆ ಅರ್ಜೆಂಟ್ ಆಗಿ O+ A+ O- AB+ A- ಇಂತಿಷ್ಟು Unit blood ಬೇಕು .. platelet ಬೇಕು, ಪ್ಲಾಸ್ಮಾ ಬೇಕು ,ರಾಮಯ್ಯ, ಮಣಿಪಾಲ, ಪೋರ್ಟಿಸ್, ನಾರಾಯಣ ಆಸ್ಪತ್ರೆ ಆಪರೇಷನ್ ಇದೆ.. ಪ್ಲೀಸ್ ಹೆಲ್ಪ್ ಮಾಡಿ ಅಂತ ಫೋನ್ ಆಗಲಿ ಮೆಸೇಜ್ ಆಗಲಿ ಮಾಡಬೇಡಿ.. ಇವತ್ತಿನಿಂದ ನಮ್ಮ voluntary blood donation (ಸ್ವಯಂ ರಕ್ತದಾನ ಸೇವೆ).ತಾತ್ಕಾಲಿಕ ಸ್ಥಗಿತ ಗೊಳಿಸಿದ್ದೇವೆ.. ಯಾಕಂದ್ರೆ ನಮ್ಮ ಗ್ರೂಪ್ ನ 107 ದಾನಿಗಳಲ್ಲಿ 89 ದಾನಿಗಳು ಮುಸ್ಲಿಂ ಧರ್ಮದವರು… ಇದುವರೆಗೆ ಕೊಟ್ಟ Units ಲೆಕ್ಕವಿಲ್ಲದಷ್ಟು. ಪಡೆದವರಲ್ಲಿ , ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೋ , ಹಿಂದೂ ಮುಸ್ಲಿಂ ಕ್ರಿಶ್ಚನ್ ನೋ ಕೇಳಿಲ್ಲ. ನಾನು ಫೋನ್ ಮಾಡಿ ಡೀಟೈಲ್ ಕಳುಹಿಸಿದಾಗಲೆಲ್ಲ ಯಾವ ಜಾತಿ , ಏನು ಧರ್ಮ ಏನೊಂದು ವಿಚಾರಿಸದೇ ನನ್ನ ಮೇಲಿನ ಅಭಿಮಾನದಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ರಕ್ತದಾನ ಮಾಡಿ ಮಾನವೀಯತೆ ತೋರಿದ್ದಾರೆ. ಕೆಲವು ಅಹಿತಕರ ಘಟನೆಗಳು ಪ್ರಸ್ತುತ ವಿದ್ಯಮಾನಗಳಿಂದಾಗಿ ಇನ್ನೂ ಮುಂದೆ ಈ ಸೇವೆ ಸ್ಥಗಿತ ಗೊಳಿಸಬೇಕಾಗಿದೆ ಎಂದು ಬಹಳ ನೋವಿನಿಂದ ತಿಳಿಸುತ್ತಿದ್ದೇನೆ… ಕ್ಷಮಿಸಿ..”
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News