ಏಡನ್ : ಯಮೆನ್ ನಗರದ ಏಡನ್ ವಿಮಾನ ನಿಲ್ದಾಣದಲ್ಲಿ ಭಾರೀ ಸ್ಫೋಟವೊಂದು ನಡೆದಿದ್ದು, ಕನಿಷ್ಠ 25 ಜನರು ಸಾವಿಗೀಡಾಗಿದ್ದು, 110 ಮಂದಿ ಗಾಯಗೊಂಡಿದ್ದಾರೆ. ನೂತನವಾಗಿ ರಚನೆಯಾದ ಸಚಿವ ಸಂಪುಟದ ಸಚಿವರುಗಳಿದ್ದ ವಿಮಾನ ನಿಲ್ದಾಣದಲ್ಲಿ ಇಳಿದ ಸ್ವಲ್ಪ ಸಮಯದ ಬಳಿಕ ಈ ಸ್ಫೋಟ ಸಂಭವಿಸಿರುವುದರಿಂದ, ಸಚಿವರನ್ನು ಗುರಿಯಾಗಿಸಿ ಈ ದಾಳಿ ನಡೆದಿದೆಯೇ? ಎಂಬ ಸಂದೇಹ ವ್ಯಕ್ತವಾಗಿದೆ.
ಇರಾನ್ ಬೆಂಬಲಿತ ಹೌದಿ ಬಂಡುಕೋರರು ವಿಮಾನ ನಿಲ್ದಾಣದ ಮೇಲೆ ನಾಲ್ಕು ಕ್ಷಿಪಣಿಗಳನ್ನು ಹಾರಿಸಿದ ಹಿನ್ನೆಲೆಯಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಯಮೆನ್ ಸರಕಾರ ತಿಳಿಸಿದೆ.
ಸರಕಾರದ ವಿಮಾನದಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ. ವಿಮಾನ ನಿಲ್ದಾಣ ದಾಳಿಯ ಬಳಿಕ ಸಚಿವರನ್ನು ಸುರಕ್ಷಿತವಾಗಿ ವರ್ಗಾಯಿಸಲಾಗಿದೆ. ಆ ನಂತರ ನಗರದ ಅರಮನೆ ಹತ್ತಿರ ಮತ್ತೊಂದು ಸ್ಫೋಟವಾಗಿದೆ ಎಂದು ವರದಿಗಳು ತಿಳಿಸಿವೆ.