ಕಾಂಗ್ರೆಸ್ ಆಡಳಿತದಲ್ಲಿ ರೈತರ ಶೋಷಣೆ ಮಿತಿಮೀರುತ್ತಿದೆ: ವಿಜಯೇಂದ್ರ

Prasthutha|

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತ ಶೋಷಣೆ ಮಿತಿಮೀರುತ್ತಿದೆ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -

ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ ರೈತ ಕುಟುಂಬದ ಗೃಹಬಂಧನ ವಿಚಾರ ಪ್ರಸ್ತಾಪಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಪಾಳೇಗಾರಿಕೆ ರಾಜಕಾರಣದ ಪೋಷಣೆಗೆ ಹೆಸರಾದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತ ಶೋಷಣೆ ಮಿತಿಮೀರುತ್ತಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದ ರೈತ ತನ್ನ ಕೃಷಿ ಚಟುವಟಿಕೆಯ ಸಲುವಾಗಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ವಿಳಂಬವಾಗಿದ್ದರಿಂದ ಸಾಲಕೊಟ್ಟವರು ರೈತನ ಪತ್ನಿ, ಪುತ್ರನನ್ನು ಅಕ್ರಮ ಗೃಹಬಂಧನದಲ್ಲಿಟ್ಟಿದ್ದರು. ಇದರಿಂದಾಗಿ ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಈ ರಾಜ್ಯದ ಜನತೆ ಇನ್ನೂ ಏನೇನು ಅನುಭವಿಸಬೇಕೋ? ತಿಳಿಯದಾಗಿದೆ. ಗೂಂಡಾಗಳು, ಮೀಟರ್ ಬಡ್ಡಿ ದಂಧೆಕೋರರು, ಕೊಲೆಗಡುಕರಿಗೆ ಈ ಸರ್ಕಾರದ ಆಡಳಿತ ವ್ಯವಸ್ಥೆ ‘ನೆರಳಿನ ಭಾಗ್ಯ’ ಕಲ್ಪಿಸಿಕೊಡುತ್ತಿದೆ ಎಂದು ವಿಜಯೇಂದ್ರ ಗುಡುಗಿದ್ದಾರೆ. ‘ರಾಜ್ಯ ಸರ್ಕಾರಕ್ಕೆ ನೈತಿಕತೆಯಿದ್ದರೆ ಕೂಡಲೇ ಯಮಕನಮರಡಿ ರೈತನ ಆತ್ಮಹತ್ಯೆ ಪ್ರಕರಣದ ಕುರಿತು ಕಠಿಣ ಕ್ರಮ ಜರುಗಿಸಿ ಮುಂದೆಂದೂ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಿ. ರೈತ ಸಮೂಹಕ್ಕೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ರೂಪಿಸಲಿ, ಮೃತ ರೈತನ ಕುಟುಂಬಕ್ಕೆ ಸೂಕ್ತ ಆರ್ಥಿಕ ನೆರವು ಹಾಗೂ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.



Join Whatsapp