ಯೂಟ್ಯೂಬ್ ನೋಡಿ ಡಿವೈಸ್ ಬಳಸಿ ದುಬಾರಿ ಕಾರುಗಳ ಕಳವು: ಖದೀಮನ ಸೆರೆ

Prasthutha|

ಬೆಂಗಳೂರು: ದುಬಾರಿ ಬೆಲೆಯ ಕಾರುಗಳನ್ನು ಅಧುನಿಕ ತಂತ್ರಜ್ಞಾನ ಬಳಸಿ ಕಳವು ಮಾಡುತ್ತಿದ್ದ ಖತರ್ನಾಕ್ ಖದೀಮನೊಬ್ಬನನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಆಗ್ನೇಯ ವಿಭಾಗದ ಪೊಲೀಸರು, 70 ಲಕ್ಷ ಮೌಲ್ಯದ ‌ಕಾರುಗಳು ಬೈಕ್ ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಕೋಲಾರದ ದೇವರಬೀಸನಹಳ್ಳಿಯ ಅರುಣ್ ಕುಮಾರ್ ಅಲಿಯಾಸ್ ಶಿವ(25) ಬಂಧಿತ ಆರೋಪಿಗಳಾಗಿದ್ದಾನೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಬಂಧಿತನಿಂದ 1 ಬೈಕ್, 10 ಕಾರುಗಳು ಹಾಗೂ ಕಾರು ಕಳುವು ಮಾಡಲು ಬಳಸುತ್ತಿದ್ದ ಅಧುನಿಕ ತಂತ್ರಜ್ಞಾನದ ಎಕ್ಸ್ ಟೂಲ್ ಆಟೋ ಡಿಯಾಗೋನ್ಟಿಕ್ ಟೂಲ್ಸ್ ಎಂಬ ಡಿವೈಸ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಹೆಚ್ಎಸ್ಆರ್ ನಲ್ಲಿ ದುಬಾರಿ ಕಾರು ಕಳವು ಕೃತ್ಯ ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಎಂ ಹೆಗಡೆ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಮುನಿರೆಡ್ಡಿ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ತಂಡವು ಕಾರು ಕಳವು ನಡೆದ ಸ್ಥಳ ಹಾಗೂ ಸುತ್ತಲಿನ ಸಿಸಿ ಟಿವಿ ಕ್ಯಾಮರಗಳ ಪರಿಶೀಲನೆ ನಡೆಸಿ ಜು.9 ರಂದು ಮುಂಜಾನೆ ಟೀಚರ್ಸ್ ಕಾಲೋನಿಯ ಮುಖ್ಯರಸ್ತೆಯಲ್ಲಿ ಬೈಕ್ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ ಎಂದರು.

ಕಳವು ವಿಧಾನ:

ಆರೋಪಿಯು ಅಪರಾಧ ಹಿನ್ನಲೆಯುಳ್ಳವನಾಗಿದ್ದು, ಈತನ ವಿರುದ್ದ ಕೊಲೆ, ರಾಬರಿ, ದರೋಡೆ ಯತ್ನ, ಹಲ್ಲೆ ಪ್ರಕರಣಗಳಿದ್ದು ರಾಬರಿ ಪ್ರಕರಣದಲ್ಲಿ ಆಂದ್ರಪ್ರದೇಶ ರಾಜ್ಯದ ಮದನಪಲ್ಲಿ ಸಬ್ ಜೈಲ್ ನಲ್ಲಿರುವಾಗ ಕಾರು ಕಳವು ಮಾಡುವ ಆಸಾಮಿ ರಾಕೇಶ್ ಎಂಬಾತನ ಪರಿಚಯವಾಗಿದ್ದು, ಆತನಿಂದ ಕಾರು ಕಳುವು ಮಾಡುವ ವಿಧಾನವನ್ನು ಕಲಿತುಕೊಂಡು ಯೂಟ್ಯೂಬ್ ನಲ್ಲಿ ಕಾರ್ ಕಳವು ಬಳಸುತ್ತಿದ್ದ ಎಕ್ಸ್ ಟೂಲ್ ಆಟೋ ಡಿಯಾಗೋನ್ಟಿಕ್ ಟೂಲ್ಸ್ ಎಂಬ ಡಿವೈಸ್ ಖರೀದಿಸಿಕೊಂಡು ಬಂದು, ಅದರ ಸಹಾಯದಿಂದ ನಗರದ ಸುತ್ತಮುತ್ತಲಿನ ಸ್ಥಳಗಳಿಗೆ ರಾತ್ರಿ ಸಮಯದಲ್ಲಿ ಬೇಟಿ ನೀಡಿ, ರಸ್ತೆಯಲ್ಲಿ ನಿಂತಿದ್ದ ಸ್ವಿಪ್ಟ್ ಕಾರು, ಸ್ವಿಪ್ಟ್ ಡಿಸೈರ್ ಕಾರು, ಹೊಂಡಾ ಇಟಿಯಸ್ ಕಾರ್, ಮಾರುತಿ ಎರಿಟಿಗಾ ಕಾರುಗಳ ಗ್ಲಾಸ್ ಹೊಡೆದು ಒಳಗಡೆ ಹೋಗಿ, ಡಿವೈಸ್ ಅನ್ನು ಕಾರ್ ಗೆ ಕನೆಕ್ಟ್ ಮಾಡಿ, ಅದರ ಜೊತೆಯಲ್ಲಿ ಅದೇ ಕಾರಿನ ನಕಲಿ ಕೀಯನ್ನು ಡಿವೈಸ್ ಗೆ ಕನೆಕ್ಟ್ ಮಾಡಿ, ಡಿವೈಸ್ ನಲ್ಲಿರುವ ಕಾರ್ ಲಾಕ್ ನ ಆಪ್ ಅನ್ನು ತೆರೆದು ಸಿಸ್ಟಮ್ ಆಪರೇಟ್ ಮಾಡಿ ಕೆಲವೇ ನಿಮಿಷಗಳಲ್ಲಿ ಕಾರು ಸ್ಟಾರ್ಟ್ ಮಾಡಿಕೊಂಡು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದನು ಎಂದು ತಿಳಿಸಿದರು.

ತಮಿಳುನಾಡಲ್ಲಿ ಮಾರಾಟ:

ಕಳ್ಳತನ ಮಾಡಿರುವ ಕಾರುಗಳನ್ನು ತಮಿಳುನಾಡು ರಾಜ್ಯದ ತಿರುಚಿ, ತಿರುವಣ್ಣಾಮಲೈ, ವೇಲೂರು, ರಾಮನಾಡು, ಮೇಟಿಪಾಳ್ಯ, ದಿಂಡಿಗಲ್, ತಿರಪತ್ತೂರ್, ಚೆನ್ನೈ, ನಾಗಪಟ್ಟಣ, ನಾಮಕಲ್ಲು ಎಂಬ ಊರುಗಳಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ ಮಾಡಿ ನಂತರದಲ್ಲಿ ನೊಂದಣಿ ದಾಖಲಾತಿಗಳನ್ನು ಕೊಡುವುದಾಗಿ ಹೇಳಿ ಹಣ ಪಡೆದುಕೊಂಡು, ಅಕ್ರಮವಾಗಿ ಗಳಿಸಿದ ಹಣದಿಂದ ಸ್ನೇಹಿತರ ಜೊತೆಯಲ್ಲಿ ಸೇರಿಕೊಂಡು ಮದ್ಯಪಾನ ಮತ್ತು ಬೇರೆ ಸ್ಥಳಗಳಲ್ಲಿ ಮೋಜು ಮಸ್ತಿ, ಪಾರ್ಟಿ ಮಾಡಿ ಪೂರ್ತಿ ಹಣವನ್ನು ಖರ್ಚು ಮಾಡಿರುತ್ತಾನೆ ಎಂದು ತಿಳಿಸಿದ್ದಾರೆ.

11ಪ್ರಕರಣ ಪತ್ತೆ:

ಆರೋಪಿಯ ಬಂಧನದಿಂದ ಮೈಕೋ ಲೇಔಟ್ ಪೊಲೀಸ್ ಠಾಣೆ, ಕೋಣನಕುಂಟೆ, ಬಾಣಸವಾಡಿ, ಬೇಗೂರು, ಬೆಳ್ಳಂದೂರು, ನಂದಗುಡಿ ಹಾಗೂ ಬಿಡದಿ ಪೊಲೀಸ್ ಠಾಣೆಯಲ್ಲಿ ವರದಿಯಾಗಿರುವ 11 ಪ್ರಕರಣಗಳು ಪತ್ತೆಯಾಗಿವೆ ಎಂದರು.

ಆರೋಪಿಯನ್ನು ಬಂಧಿಸಿರುವ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನಗರ ಪೊಲೀಸ್ ಆಯುಕ್ತರು ಅಭಿನಂದಿಸಿದ್ದಾರೆ ಎಂದು ಅವರು ತಿಳಿಸಿದರು.



Join Whatsapp