ದಕ್ಷಿಣ ಕನ್ನಡ ಸೇರಿ 5 ಜಿಲ್ಲೆಗಳು ಹೊರತುಪಡಿಸಿ ಉಳಿದೆಡೆ ಶಾಲಾ-ಕಾಲೇಜು ಆರಂಭ

Prasthutha|

ಬೆಂಗಳೂರು: ಕೋವಿಡ್ ದೃಢ ಪ್ರಮಾಣ ಶೇಕಡಾ 2ಕ್ಕಿಂತ ಹೆಚ್ಚಿರುವ ಐದು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ 9ರಿಂದ 12ರವರೆಗಿನ ತರಗತಿಗಳು ಇಂದಿನಿಂದ ಪ್ರಾರಂಭವಾಗಿವೆ.


ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಭೌತಿಕ ತರಗತಿಗಳು ಆರಂಭಗೊಂಡಿವೆ. ವಿದ್ಯಾರ್ಥಿಗಳು ಉತ್ಸಾಹದಿಂದ ಕಾಲೇಜುಗಳಿಗೆ ತೆರಳುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ ಸಿ. ಎನ್. ಅಶ್ವಥ ನಾರಾಯಣ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಕಾಲೇಜಿಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.

- Advertisement -


ತಾಪಮಾನ ಪರೀಕ್ಷೆಗೊಳಗಾಗಿ ಶಾಲೆಯ ಆವರಣದೊಳಗೆ ಪ್ರವೇಶಿಸಿದ ಮುಖ್ಯಮಂತ್ರಿ ಮತ್ತು ಸಚಿವರು ಶಾಲೆಯ ಆವರಣದಲ್ಲಿ ಸಂಪಿಗೆ ಗಿಡವನ್ನು ನೆಟ್ಟರು. ನಂತರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು. ತರಗತಿಗೆ ಆಗಮಿಸಿ ಕೋವಿಡ್ ಮಾರ್ಗಸೂಚಿಯನ್ನು ಪರಿಶೀಲಿಸಿ ವಿದ್ಯಾರ್ಥಿಗಳ ಜೊತೆಗೆ ಮಾತನಾಡಿದರು.
ಮಕ್ಕಳು ಪ್ರತಿನಿತ್ಯ ಬರುವಾಗ ಮತ್ತು ಶಾಲೆಯಲ್ಲಿ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಕಾಯ್ದುಕೊಳ್ಳಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.


ನಂತರ ಮಾಧ್ಯಮಗಳ ಜೊತೆ ಮಾತನಾಡಿ ಮುಖ್ಯಮಂತ್ರಿ, ಕೋವಿಡ್ ನಿಂದ ಇಂದು ಸ್ವತಂತ್ರಗೊಂಡು ಮಕ್ಕಳು ಶಾಲೆ, ಕಾಲೇಜಿಗೆ ಬರುತ್ತಿರುವುದು ನೋಡಿದರೆ ನಿಜಕ್ಕೂ ಸಂತಸವಾಗುತ್ತದೆ. ನನಗೆ ಮಾತ್ರವಲ್ಲದೆ ನಮ್ಮ ಸಂಪುಟ ಸಹೋದ್ಯೋಗಿಗಳಿಗೆ, ಶಾಸಕರಿಗೆ ಕೂಡ ಇಂದು ಸಂತೋಷದ ದಿನ, ಈ ಸಂತೋಷವನ್ನು ಕೋವಿಡ್ ನಿಯಮ ಸರಿಯಾಗಿ ಪಾಲಿಸಿಕೊಂಡು ಹೋಗಿ ಕಾಪಾಡೋಣ ಎಂದರು.
ವಿದ್ಯಾರ್ಥಿಗಳು ಅತ್ಯಂತ ಖುಷಿಯಿಂದ ಶಾಲೆಗೆ ಬಂದಿದ್ದು, ಶಾಲೆ ಆರಂಭಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಕೋವಿಡ್ ಕಡಿಮೆಯಾದರೆ ಗಡಿ ಜಿಲ್ಲೆಗಳಲ್ಲಿ ಶಾಲೆ ಆರಂಭಿಸುತ್ತೇವೆ. 1ರಿಂದ 8ನೇ ತರಗತಿ ಆರಂಭಿಸುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

- Advertisement -