ನವದೆಹಲಿ: ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಚಿವರ ನಿವಾಸಗಳ ಬಳಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆಯಲ್ಲಿ ಕೊಳೆಗೇರಿ ನಿವಾಸಿಗಳು, ಆಟೋ ಚಾಲಕರು ಮತ್ತು ಹಿರಿಯ ನಾಗರಿಕರು ಭಾಗವಹಿಸಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಸಾರ್ವಜನಿಕ ಹಣದಲ್ಲಿ ಮದ್ಯ ಮಾಫಿಯಾಕ್ಕೆ ಲಾಭ ತಂದಿರುವ ಅಬಕಾರಿ ಹಗರಣ ಬಯಲಾಗಿರುವುದರಿಂದ ಜನರು ಬಿಜೆಪಿ ಪಕ್ಷದೊಂದಿಗೆ ಇದ್ದಾರೆ ಎಂದು ಪ್ರತಿಭಟನೆಯಲ್ಲಿ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ ಕಿಡಿಕಾರಿದರು.
ಕೇಜ್ರಿವಾಲ್ ಸರ್ಕಾರ ಉತ್ತರಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ಆದರೆ ಸಿಸೋಡಿಯಾ ಅವರನ್ನು ತೆಗೆದು ಹಾಕುವವರೆಗೂ ಬಿಜೆಪಿ ವಿಶ್ರಮಿಸುವುದಿಲ್ಲ ಎಂದು ಅವರು ಹೇಳಿದರು.
ವಿರೋಧ ಪಕ್ಷದ ನಾಯಕ ರಾಮ್ವೀರ್ ಸಿಂಗ್ ಬಿಧುರಿ ಮತ್ತು ಬಿಜೆಪಿ ದೆಹಲಿ ಘಟಕದ ಪ್ರಧಾನ ಕಾರ್ಯದರ್ಶಿ ದಿನೇಶ್ ಪ್ರತಾಪ್ ಸಿಂಗ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.