ವಾಷಿಂಗ್ಟನ್: 2020ರ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ, ಅಕ್ರಮ ಆರೋಪ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದ್ದು, ಬಳಿಕ ಕೆಲವೇ ಹೊತ್ತಿನಲ್ಲಿ ಶ್ಯೂರಿಟಿ ಮೇಲೆ ಬಿಡುಗಡೆ ಮಾಡಲಾಗಿದೆ.
2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದಿತ್ತು. ಪಿತೂರಿ, ವಂಚನೆ ಯತ್ನ ಸೇರಿದಂತೆ 13 ಪ್ರಕರಣಗಳು ದಾಖಲಾಗಿದ್ದವು. ಈ ಆರೋಪಗಳ ಮೇರೆಗೆ ಜಾರ್ಜಿಯಾ ಪೊಲೀಸರು, ಔಪಚಾರಿಕವಾಗಿ ಟ್ರಂಪ್ರನ್ನು ಬಂಧಿಸಿ ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಲ್ಲಿದ್ದರು. 200,000 ಡಾಲರ್ ಮೌಲ್ಯದ ಬಾಂಡ್ ಶ್ಯೂರಿಟಿ ನೀಡಿದ ಬಳಿಕ ಜಾಮೀನಿನ ಮೇಲೆ ಡೊನಾಲ್ಡ್ ಟ್ರಂಪ್ ಅವರನ್ನು ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
2020ರ ಜಾರ್ಜಿಯಾ ಚುನಾವಣೆ ಫಲಿತಾಂಶ ಸಂಬಂಧಿಸಿ, ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಸೇರಿ 18 ಜನರ ವಿರುದ್ಧ ಫುಲ್ಟನ್ ಕೌಂಟಿ ಕೋರ್ಟ್ ದೋಷಾರೋಪ ಹೊರಿಸಿತ್ತು. ಫಲಿತಾಂಶ ಕಾನೂನು ಬಾಹಿರವಾಗಿ ಟ್ರಂಪ್ ಪರ ಬದಲಿಸಲು ನಡೆದ ಪಿತೂರಿ ಜೊತೆ ಉದ್ದೇಶಪೂರ್ವಕ ಮತ್ತು ಪ್ರಜ್ಞಾಪೂರ್ವಕವಾಗಿ ಇತರರು ಕೈಜೋಡಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.
ದಕ್ಷಿಣ ಪ್ರಾಂತ್ಯದ ರಾಜ್ಯಗಳ ಚುನಾವಣಾ ಫಲಿತಾಂಶ ರದ್ದತಿಗೆ ಸಂಚು, ಪಿತೂರಿ, ವಂಚನೆ ಯತ್ನ ಸೇರಿದಂತೆ ಒಟ್ಟು 13 ಪ್ರಕರಣಗಳು ಜಾರ್ಜಿಯಾ ಠಾಣೆಯಲ್ಲಿ ದಾಖಲಾಗಿದ್ದವು. ಈ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಟ್ರಂಪ್ರನ್ನು ಜಾರ್ಜಿಯಾ ಪೊಲೀಸರು ಬಂಧಿಸಿದ್ದರು.
ಸರ್ಕಾರದ ದಾಖಲೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜೂನ್ ತಿಂಗಳಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ಮಿಯಾಮಿ ಕೋರ್ಟ್ ಎದುರು ಟ್ರಂಪ್ ಶರಣಾಗಿದ್ದ ಈ ವೇಳೆ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದರು. ಈಗಾಗಲೇ ಟ್ರಂಪ್ ಬೇರೆ-ಬೇರೆ ಪ್ರಕರಣಗಳಲ್ಲಿ ರಿಲೀಫ್ ಪಡೆದಿದ್ದರು.