ಪುಟ್ ಪಾತ್ ಮೇಲೆ ಕಾರು ಹರಿಸಿದ ಕುಡುಕ ಚಾಲಕ: ನಿವೃತ್ತ ಯೋಧ ಸಾವು, ನಾಲ್ವರಿಗೆ ಗಾಯ

Prasthutha|

ಬೆಂಗಳೂರು: ಕುಡಿದ ಅಮಲಿನಲ್ಲಿ ಅತಿವೇಗವಾಗಿ ಚಾಲಕ ಕಾರನ್ನು ಪುಟ್ ಪಾತ್ ಮೇಲೆ ಚಲಾಯಿಸಿದ ಪರಿಣಾಮ ನಿವೃತ್ತ ಯೋಧ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಹೆಬ್ಬಾಳದ ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.

- Advertisement -

ವಿದ್ಯಾರಣ್ಯಪುರದ ತಿಂಡ್ಲುವಿನ ನಿವೃತ್ತ ಯೋಧ ರವಿಶಂಕರ್ (59) ಮೃತಪಟ್ಟವರು ಎಂದು ಉತ್ತರ ವಿಭಾಗದ ಸಂಚಾರ ಡಿಸಿಪಿ ಸವಿತಾ ತಿಳಿಸಿದ್ದಾರೆ. ಗಾಯಗೊಂಡಿರುವ ಮಂಜುನಾಥ್, ನವೀನ್, ರಾಘವೇಂದ್ರ, ಪ್ರಕಾಶ್ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಕ್ವಾಡ್ ಇಂಡಿಯಾ ಸೆಕ್ಯುರಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಿವೃತ್ತ ಯೋಧ ರವಿಶಂಕರ್ ಅವರು ತಮ್ಮದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಾಯಗೊಂಡಿರುವ ಮಂಜುನಾಥ್, ನವೀನ್ ಹಾಗೂ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಪ್ರಕಾಶ್ ಜೊತೆಗೆ ಹೆಬ್ಬಾಳದ ಕೊಡಿಗೇಹಳ್ಳಿ ಮುಖ್ಯರಸ್ತೆಯ ಪುಟ್ ಪಾತ್ ನಲ್ಲಿ ರಾತ್ರಿ 11.45ರ ವೇಳೆ ನಿಂತಿದ್ದರು.

- Advertisement -

ಈ ವೇಳೆ  ಕುಡಿದ ಅಮಲಿನಲ್ಲಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಚಾಲಕ, ಐವರ ಮೇಲೆ ಕಾರು ಹರಿಸಿ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಗಾಯಗೊಂಡ ಐವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರಾದರೂ ಅವರಲ್ಲಿ ನಿವೃತ್ತ ಯೋಧ ರವಿಶಂಕರ್ ಅವರು ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಕುಡಿದ ಮತ್ತಿನಲ್ಲಿ ಫುಟ್ ಪಾತ್ ಮೇಲೆ ಕಾರು ಚಲಾಯಿಸಿದ ಚಾಲಕ ಪೂವಯ್ಯ ಪರಾರಿಯಾಗಿದ್ದು ಆತನ ಬಂಧನಕ್ಕೆ  ಹೆಬ್ಬಾಳ ಸಂಚಾರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.



Join Whatsapp