ಉಡುಪಿ: ಜಿಲ್ಲೆಯಲ್ಲಿರುವ ಹಡೀಲು ಬಿದ್ದ ಕೃಷಿ ಭೂಮಿಗಳಲ್ಲಿ ಕೃಷಿ ಚಟುವಟಿಕೆ ಮೂಲಕ ಗಮನ ಸೆಳೆದಿರುವ ಶಾಸಕ ರಘುಪತಿ ಭಟ್ ಅವರು ಮೊದಲು ತಮ್ಮ ಕ್ಷೇತ್ರದಲ್ಲಿರುವ ಸರಕಾರಿ ಸಹಭಾಗಿತ್ವದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನ ಹಡೀಲು ಬೀಳುವುದನ್ನ ತಪ್ಪಿಸಿ ಆ ಮೂಲಕ ಬಡ ಜನರ ಸಂಕಷ್ಟಕ್ಕೆ ನೆರವಾಗಲಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಉದ್ಯಮಿ ಬಿಆರ್ ಶೆಟ್ಟಿ ಹಾಗೂ ಸರಕಾರಿ ಸಹಭಾಗಿತ್ವದಲ್ಲಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ಆಸ್ಪತ್ರೆ ನಿರ್ಮಿಸಲಾಗಿತ್ತು. ನಿರ್ಮಾಣಕ್ಕೂ ಮುನ್ನವೇ ಉದ್ಯಮಿ ಬಿಆರ್ ಶೆಟ್ಟಿ ಹಾಗೂ ಸರಕಾರದ ನಡುವೆ ನಡೆದ ಒಪ್ಪಂದದಂತೆ ಸರಕಾರಿ ಜಾಗದಲ್ಲಿ 400 ಬೆಡ್ ಗಳ ಖಾಸಗಿ ಆಸ್ಪತ್ರೆಯನ್ನ ಬಿಆರ್ ಶೆಟ್ಟಿ ಅವರು ನಿರ್ಮಿಸಬೇಕಿತ್ತು. ಹಾಗೂ ಅಲ್ಲಿ ನಿರ್ಮಾಣವಾಗುವ ಖಾಸಗಿ ಆಸ್ಪತ್ರೆಯ ಲಾಭದಿಂದಲೇ ಪ್ರಸ್ತುತವಿರುವ 200 ಬೆಡ್ ಗಳ ಸರಕಾರಿ ಸಹಭಾಗಿತ್ವದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಹಿತ ಎರಡೂ ಆಸ್ಪತ್ರೆಗಳ ನಿರ್ವಹಣೆ ನಡೆಸುವುದಾಗಿ ಒಡಂಬಡಿಕೆ ಆಗಿತ್ತು. ಇದಕ್ಕೆ ಕಾಂಗ್ರೆಸ್ ಸರಕಾರ ಒಪ್ಪಿಗೆಯನ್ನೂ ಸೂಚಿಸಿತ್ತು.
ಆದರೆ ಸರಕಾರ ಬದಲಾದ ನಂತರ ಉದ್ಯಮಿ ಬಿಆರ್ ಶೆಟ್ಟಿ ನಿರ್ಮಿಸಲು ಮುಂದಾಗಿದ್ದ 400 ಬೆಡ್ ಗಳ ಖಾಸಗಿ ಆಸ್ಪತ್ರೆಗೆ ಅಡ್ಡಿಪಡಿಸುತ್ತಲೇ ಬರಲಾಗಿದೆ. ಅದರಲ್ಲೂ ಉಡುಪಿ ಶಾಸಕ ರಘುಪತಿ ಭಟ್ ಅವರು ವಿರೋಧ ವ್ಯಕ್ತಪಡಿಸುತ್ತಾ ಬಂದಿರುವುದರಿoದ ಸದ್ಯ ಆಸ್ಪತ್ರೆಯಲ್ಲಿ ಉಂಟಾದ ಬೆಳವಣಿಗೆಗೆ ಅವರೇ ಕಾರಣರಾಗಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ಆಪಾದಿಸಿದ್ದಾರೆ.
ಆದ್ದರಿಂದ ಆಸ್ಪತ್ರೆಯ ನೌಕರರಿಗೆ ವೇತನ ಸಹಿತ ಸೇವಾ ಭದ್ರತೆ ನೀಡುವ ಮೂಲಕ ಅಲ್ಲಿರುವ ರೋಗಿಗಳ ಸುರಕ್ಷತೆಯನ್ನೂ ಕಾಪಾಡುವ ಕೆಲಸ ಮಾಡಲಿ ಎಂದು ಪ್ರಮೋದ್ ಮಧ್ವರಾಜ್ ಆಗ್ರಹಿಸಿದ್ದಾರೆ.