ಮನಸ್ಥಿತಿ ಬದಲಾಗಬೇಕಾದುದು ಪ್ರತಾಪ ಸಿಂಹನದ್ದು, ಮುಸ್ಲಿಮರದ್ದಲ್ಲ: ಕೆ.ಅಶ್ರಫ್ ತಿರುಗೇಟು

Prasthutha|

ಮಂಗಳೂರು: ಮುಸ್ಲಿಮರು ಕಲ್ಲು ತೂರುವ ಸಂಸ್ಕೃತಿಯವರು. ಅವರ ಮನಸ್ಥಿತಿ ಬದಲಾಗೇಕಿದೆ ಎಂಬ ಮೈಸೂರು ಸಂಸದ ಪ್ರತಾಪ್ ಸಿಂಹ  ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಮನಸ್ಥಿತಿ ಬದಲಾಗಬೇಕಾದುದು ಪ್ರತಾಪ ಸಿಂಹರದ್ದು, ಮುಸ್ಲಿಮರದ್ದಲ್ಲ ಎಂದು ತಿರುಗೇಟು ನೀಡಿದ್ದಾರೆ.

- Advertisement -

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ಉಂಟಾದುದು ದುಷ್ಕರ್ಮಿ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ನಿಂದನಾತ್ಮಕ  ಪೋಸ್ಟ್ ನಿಂದಾಗಿದೆ. ಪೊಲೀಸರು ಕ್ಲಪ್ತ ಸಮಯಕ್ಕೆ ಕ್ರಮ ಕೈಗೊಂಡಿದ್ದರೆ ಹುಬ್ಬಳಿ ಸ್ಥಿತಿ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಆದರೆ, ಹುಬ್ಬಳಿಯ ಕೇಶವ ಕುಂಜದ ಅಣತಿಯಂತೆ ಯೋಜನೆ ಬೇರೆಯೇ ತಯಾರಾಗಿದ್ದು, ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಈ ಬಗ್ಗೆ ಅರಿವಿಲ್ಲ. ಅಂದು ಗುಂಪಿನಲ್ಲಿ ಸೇರಿಕೊಂಡ ಸಂಘ ಪ್ರೇರಿತ ಹಿಂದುಳಿದ ವರ್ಗದ ಪುಂಡ ಹುಡುಗರು ಘಟನಾ ಸ್ಥಳದಲ್ಲಿ ಯೋಜನೆಯಂತೆ ಕಲ್ಲು ಬಿಸಾಡಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ. ನೈಜ ಸಂಗತಿ ಬಹಿರಂಗವಾಗಲಿ ಎಂದು ಅವರು ಹೇಳಿದ್ದಾರೆ.

ಪ್ರತಾಪ್ ಸಿಂಹ ಏನೋ ತುರ್ತು ಸ್ಥಿತಿಯಲ್ಲಿದ್ದಾರೆ. ಬಹುಶಃ ಮೈಸೂರಿನ ಮಾಧವ ಕೃಪಾದಿಂದ ಅವರಿಗೆ ಸೂಚನೆ ಬಂದಿರಬೇಕು.   ಮಾಧವ ಕೃಪಾ ಪ್ರೇರಿತ ಹೇಳಿಕೆ ನೀಡಿ ಮುಸ್ಲಿಮರ ಚಿಂತನೆಯನ್ನು ಬದಲಿಸಲು ಪ್ರತಾಪ್ ಸಿಂಹ ಹೊರಟಿದ್ದಾರೆ.  ಈ ದೇಶದ ಮುಸ್ಲಿಮರು ಚಿಂತಿಸಿಯೆ ಈ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಜೀವವನ್ನು ಬಲಿದಾನ ಮಾಡಿದ್ದಾರೆ. ಅಗತ್ಯ ಬಿದ್ದರೆ ಈ ದೇಶದ ಸಂವಿಧಾನದ ಉಳಿವಿಗೆ ಕೂಡಾ ಜೀವ ಬಲಿ ನೀಡಲು ಸಿದ್ಧರಿದ್ದಾರೆ ಎಂಬುದನ್ನು ಪ್ರತಾಪ್ ಸಿಂಹ ತಿಳಿಯಲಿ ಎಂದು ಅಶ್ರಫ್ ಹೇಳಿದ್ದಾರೆ.

- Advertisement -

ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಾ ಗಾಂಧಿ, ಮೌಲಾನ ಅಬುಲ್ ಕಲಾಂ ಆಝಾದ್, ಬಸವಣ್ಣ, ಕೆಂಪೇಗೌಡ, ಹಜ್ರತ್ ಟಿಪ್ಪು ಸುಲ್ತಾನ್, ಕುವೆಂಪು, ದೊರೆಸ್ವಾಮಿ, ದೇವರಾಜ ಅರಸ್, ಸ್ವಾಮಿ ವಿವೇಕಾನಂದರು, ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಮುಂತಾದ ಸಾಮಾಜಿಕ ಸುಧಾರಕರು ಹಾಕಿ ಕೊಟ್ಟ ನೈತಿಕ ಪ್ರತಿಪಾದನೆಯಿಂದ ಈ ದೇಶದ ಮುಸ್ಲಿಮರು, ಹಿಂದುಳಿದ ವರ್ಗ, ಪರಿಶಿಷ್ಟರು, ಬುಡಕಟ್ಟು ಜನರು ಅನಾದಿ ಕಾಲದಿಂದ ಸೌಹಾರ್ದ ಪರಂಪರೆ ಮೆರೆದಿದ್ದಾರೆ. ಮುಸ್ಲಿಮರ ಚಿಂತನಾ ಲಹರಿ ಸಮರ್ಪಕವಾಗಿಯೇ ಇದೆ. ಬದಲಾಗಬೇಕಾದುದು ಪ್ರತಾಪ್ ಸಿಂಹರಂತಹ ಮಾಧವಾ ಕೃಪಾದ ಲಿಖಿತ ಹೇಳಿಕೆ ನೀಡುವ ವ್ಯಕ್ತಿಗಳದ್ದು ಎಂದು ಕೆ.ಅಶ್ರಫ್ ತಿರುಗೇಟು ನೀಡಿದ್ದಾರೆ.

Join Whatsapp