ಅಹ್ಮದಾಬಾದ್ :1967 ರಲ್ಲಿ ಬರೋಬ್ಬರಿ 17 ಸಾವಿರ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ, ಖೇಡಬ್ರಹ್ಮ-ವಿಜಯನಗರ ಕ್ಷೇತ್ರದ ಸ್ವತಂತ್ರ ಶಾಸಕರಾಗಿ ಗುಜರಾತ್ ವಿಧಾನಸಭೆಗೆ ಆಯ್ಕೆಯಾದ ಜೀತಾಭಾಯಿ ರಾಥೋಡ್ ಎಂಬ ಮಾಜಿ ಶಾಸಕರು ಈಗ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ.
80 ವರ್ಷದ ಜೀತಾಭಾಯಿಗೆ ಐದು ಜನ ಮಕ್ಕಳ ಅವಿಭಕ್ತ ಕುಟುಂಬವಿದ್ದು ಇಡೀ ಕುಟುಂಬವೀಗ ಬಿಪಿಎಲ್ ಕಾರ್ಡ್‌ನ ಆಶ್ರಯದಲ್ಲಿ ಬದುಕುತ್ತಿದೆ. ಸದ್ಯ ಪಿತ್ರಾರ್ಜಿತವಾಗಿ ಬಂದ ಗುಡಿಸಲಿನಂತಿರುವ ಮನೆಯಲ್ಲಿ ವಾಸವಾಗಿದ್ದು, ಬಿಪಿಎಲ್ ಕಾರ್ಡ್ ರೇಶನ್ ಪಡೆದು ಜೀವನ ಸಾಗಿಸುತ್ತಿದ್ದಾರೆ. ಅವರ ಐವರು ಪುತ್ರರು ಕೂಲಿ ಕೆಲಸ ಮಾಡುತ್ತಿದ್ದು, ಜೀತಾಭಾಯಿ ಪಿಂಚಣಿಗಾಗಿ ನ್ಯಾಯಾಲಯದ ಬಾಗಿಲು ತಟ್ಟಿದರು. ಸುದೀರ್ಘ ಕಾನೂನು ಹೋರಾಟದ ನಂತರ ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿತು. ಆದರೆ, ಇವರಿಗೆ ಇದುವರೆಗೂ ಪಿಂಚಣಿ ಹಣ ಬಂದಿಲ್ಲ, ಯಾವುದೇ ಸರ್ಕಾರ ಕೂಡ ಸಹಾಯ ಮಾಡಿಲ್ಲ ಎನ್ನಲಾಗಿದೆ.
ಸ್ಥಳೀಯ ಜನರ ಪ್ರಕಾರ, ಜೀತಾಭಾಯಿ ರಾಥೋಡ್ ಶಾಸಕರಾಗಿದ್ದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ನಡೆದಿದ್ದವು. ಅದರಲ್ಲೂ ಊರಿಗೆ ರಸ್ತೆಗಳು ಹಾಗೂ ಕೆರೆಗಳ ಪುನರುಜ್ಜೀವನ ಮಾಡಿದ್ದು ಜೀತಾಭಾಯಿ ರಾಥೋಡ್ ಎಂದು ಈಗಲೂ ನೆನಪಿಸಿಕೊಳ್ಳುತ್ತಾರೆ. ಕ್ಷೇತ್ರದ ಪ್ರತಿ ಮತದಾರರ ಬಳಿ ಸೈಕಲ್ ಏರಿ ಹೋಗುತ್ತಿದ್ದ ಅವರು, ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಜನರ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಅವಶ್ಯಕತೆ ಇದ್ದರೆ, ಸಾರಿಗೆ ಸಂಸ್ಥೆಯ ಬಸ್ ಏರಿ ರಾಜಧಾನಿಗೆ ಹೋಗಿ ಸಮಸ್ಯೆ ಬಗೆಹರಿಸುತ್ತಿದ್ದರು.
ಕೆಟ್ಟ ಕಾಲದಲ್ಲಿ ಸಾರ್ವಜನಿಕರ ಕಣ್ಣೀರು ಒರೆಸಿದ ಶಾಸಕನಿಗೆ ಇಂದು ಕಣ್ಣೀರು ಒರೆಸುವವರೇ ಇಲ್ಲದಂತಾಗಿದೆ. ಈಗ ಸರಕಾರ ನೆರವಿಗೆ ಧಾವಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.