ಚಾಮರಾಜನಗರ: ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಗ್ರಾಮದ ಒಂದು ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದೆ.
ಈ ಮತಗಟ್ಟೆಗೆ ಎ.29 ರಂದು(ಸೋಮವಾರ) ಬೆಳಗ್ಗೆ 7.00 ರಿಂದ ಸಂಜೆ 6.00 ರವರೆಗೆ ಮರುಮತದಾನ ನಡೆಯಲಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಇಂಡಿಗನತ್ತ, ತೇಕಣೆ, ಮೆಂದಾರೆ ತುಳಸಿಕೆರೆ ಹಾಗೂ ಪಡಸಲನತ್ತ ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಕಾರಣ ಗ್ರಾಮಸ್ಥರು ಮತದಾನದಿಂದ ದೂರ ಉಳಿದುಕೊಂಡಿದ್ದರು. ನಮಗೆ ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಹಾಗಾಗಿ ನಾವೇಕೆ ವೋಟ್ ಮಾಡಬೇಕು ಎಂದು ಐದು ಗ್ರಾಮದ ಜನರು ಮತಗಟ್ಟೆ ಬರದೇ ಆಕ್ರೋಶ ಹೊರಹಾಕಿದ್ದರು.
ಮತದಾನ ಬಹಿಷ್ಕಾರ ಹಾಕಿದ ಹಿನ್ನೆಲೆ ಚುನಾವಣೆ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಕೆಗೆ ಬೆಳಗ್ಗೆಯಿಂದಲೂ ಪ್ರಯತ್ನಿಸುತ್ತಿದ್ದರು. ಅಂತಿಮವಾಗಿ ಒಂದು ಗುಂಪು ಮತದಾನ ಮಾಡೋಕೆ ಮುಂದಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಮತದಾನ ಬಹಿಷ್ಕರಿಸಿದ್ದ ಜನರು ಮತಗಟ್ಟೆ ಬಳಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದೆ. ಒಂದಿಷ್ಟು ಜನರು ಮತಗಟ್ಟೆಯೊಳಗೆ ನುಗ್ಗಿ ಇವಿಎಂ ಯಂತ್ರ, ಪೀಠೋಪಕರಣಗಳು ಧ್ವಂಸಗೊಳಿಸಿದ್ದರು.