ಮಡಿಕೇರಿ: ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸುವಂತಾಗಬೇಕು. ಇದರಿಂದ ಆರ್ಥಿಕ ಚಟುವಟಿಕೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕರೆ ನೀಡಿದ್ದಾರೆ.
ತಾಲೂಕಿನ ಹೊದ್ದೂರು ಗ್ರಾ.ಪಂ.ಕಚೇರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಸ್ವರಾಜ್ ಸೌಧ’ ಸಭಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಕೃಷಿ ಜೊತೆಗೆ ಪ್ರವಾಸೋದ್ಯಮಕ್ಕೆ ಒತ್ತು ನೀಡಿದಾಗ ಆರ್ಥಿಕ ಚಟುವಟಿಕೆಗೆ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಇಲ್ಲಿ ನಿರ್ಮಾಣವಾಗಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಹಿಂದೆ ಕ್ಲಬ್ ಮಹೀಂದ್ರ ರೆಸಾರ್ಟ್ ನಿರ್ಮಾಣ ಸಂದರ್ಭದಲ್ಲಿ ನಾವು ಸಹ ವಿರೋಧ ವ್ಯಕ್ತಪಡಿಸಿದ್ದೆವು. ನಂತರ ತಾಜ್ ವಿವಾಂತ, ತಾಮರ, ಆರೇಂಜ್ ಕೌಂಟಿ, ಇಬ್ಬನಿ ಹೀಗೆ ಹಲವು ರೆಸಾರ್ಟ್ಗಳು ಆರಂಭವಾದವು. ಕ್ಲಬ್ ಮಹೇಂದ್ರದಲ್ಲಿಯೇ 150 ಮಂದಿ ಸ್ಥಳೀಯರಿಗೆ ಉದ್ಯೋಗ ದೊರೆತಿದೆ. ಹೀಗೆ ಕೃಷಿ ಜೊತೆಗೆ ಪ್ರವಾಸೋದ್ಯಮಕ್ಕೆ ಒತ್ತು ನೀಡಿದಾಗ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತೀ ವಾರ 25 ಸಾವಿರಕ್ಕೂ ಹೆಚ್ಚು ಜನರು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಾರೆ. ಇದರಿಂದ ವ್ಯಾಪಾರ ವಹಿವಾಟು ಟ್ಯಾಕ್ಸಿ, ಹೋಟೆಲ್, ಹೀಗೆ ಆರ್ಥಿಕ ಚಟುವಟಿಕೆಗೆ ಅನುಕೂಲವಾಗಲಿದೆ. ಕೊಡಗು ಜಿಲ್ಲೆಯಲ್ಲಿ ಭೂಮಿಯ ಬೆಲೆಯು ಹೆಚ್ಚಳವಾಗಿದೆ ಎಂದು ಅಪ್ಪಚ್ಚುರಂಜನ್ ಅವರು ತಿಳಿಸಿದರು.
ಕೊಡಗು ಪ್ರವಾಸೋದ್ಯಮ ತನ್ನದೇ ಆದ ಸ್ಥಾನ ಪಡೆಯುತ್ತಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಆದಲ್ಲಿ, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಲಿವೆ. ಆದ್ದರಿಂದ ಎಲ್ಲರೂ ಕ್ರೀಡಾಂಗಣ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶಾಸಕರು ಹೇಳಿದರು.