ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರನ್ನು ವಿಚಾರಣೆ ಮಾಡದೆ ಕ್ಲೀನ್ ಚಿಟ್ ನೀಡಿರುವದನ್ನು ತೀವ್ರವಾಗಿ ಖಂಡಿಸಿರುವ ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ಮುಚ್ಚಿಹಾಕಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಪ್ರಕರಣವನ್ನು ಸಿ ಬಿ ಐ ಗೆ ವಹಿಸಬೇಕು. ಇಲ್ಲದಿದ್ದರೆ ನಾವು ಇದನ್ನು ನ್ಯಾಯಾಲಯದಿಂದ ಪ್ರಶ್ನೆ ಮಾಡುತ್ತೇವೆ . ಈಶ್ವರಪ್ಪನವರೇ ಆರೋಪಿ ಎಂದು ನನ್ನ ಗಂಡ ಡೆತ್ ನೋಟ್ ನಲ್ಲಿ ಬರೆದು ಇಟ್ಟಿದ್ದಾರೆ. ಸಂತೋಷ್ ಸಾವಿನ ನಂತರ ಮೂರರಿಂದ ನಾಲ್ಕು ತಾಸು ಫೋನ್ ಆನ್ ಇತ್ತು, ಅದರಲ್ಲಿ ಎಲ್ಲ ಸಾಕ್ಷಿ ಇತ್ತು, ಹೀಗಿರುವಾಗ ಸಾಕ್ಷಾಧಾರಗಳ ಕೊರತೆ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.