ಶಿವಮೊಗ್ಗ: ಚುನಾವಣೆ ಬಳಿಕ ಪುನಃ ಹಿಂದುಳಿದವರು ಮತ್ತು ದಲಿತರನ್ನು ಒಟ್ಟುಗೂಡಿಸುವ ಮತ್ತು ಅವರಿಗೆ ಅಧಿಕಾರ ನೀಡುವ ಪ್ರಯತ್ನ ನಡೆಸಲು ‘ಹಿಂದ’ ಸಂಘಟನೆಯನ್ನು ಹುಟ್ಟು ಹಾಕುವ ಚಿಂತನೆ ನಡೆಸಿರುವುದಾಗಿ ಮಾಜಿ ಸಚಿವ, ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ. ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಚುನಾವಣೆ ಬಳಿಕ ಇಡೀ ರಾಜ್ಯಾದ್ಯಂತ ಸುತ್ತಿ, ವಿವಿಧ ಜಾತಿ, ಸಂಘಟನೆಯ ನಾಯಕರನ್ನು ಭೇಟಿ ಮಾಡಿ, ಚರ್ಚಿಸಿ ಸಂಘಟನೆಯನ್ನು ಹುಟ್ಟು ಹಾಕುವ ಚಿಂತನೆಯಿದೆ. ಇದು ಯಾವ ಸ್ವರೂಪದಲ್ಲಿ ಇರಬೇಕು ಎಂಬುದನ್ನು ಆ ನಂತರವೇ ನಿರ್ಧರಿಸಲಾಗುವುದು. ಆದರೆ ಇಂತಹ ಸಂಘಟನೆಯೊಂದು ಅಗತ್ಯ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ಹೇಳಿದರು.
ಈ ಹಿಂದೆ ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ಸಂಘಟನೆ ಕಟ್ಟಿ ಬೆಳೆಸಿದ್ದೆ. ಆದರೆ ಯಡಿಯೂರಪ್ಪನವರು ಕೇಂದ್ರದ ನಾಯಕ ಅಮಿತ್ ಶಾ ಅವರಿಗೆ ತಪ್ಪು ಮಾಹಿತಿ ನೀಡಿ ಇದನ್ನು ವಿಸರ್ಜನೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ನಾನು ಎಲ್ಲಿ ಮುಖ್ಯಮಂತ್ರಿಯಾಗಿ ಬಿಡುತ್ತೇನೆಯೋ ಎಂಬ ಹೆದರಿಕೆ ಅವರಲ್ಲಿ ಇತ್ತು ಎಂದು ಕಾಣುತ್ತದೆ. ಆದರೆ ನಾನು ಅದಕ್ಕೆ ಒಪ್ಪಬಾರದಿತ್ತು ಎಂದು ಈಗ ಅನಿಸುತ್ತಿದೆ. ಈಗ ಸಂಘಟನೆಗೆ ಮರು ಜೀವ ನೀಡುತ್ತೇನೆ ಎಂದರು.