ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಮಾನ ಅವಕಾಶಗಳು ಅಗತ್ಯ: ಸಿಎಂ ಬೊಮ್ಮಾಯಿ

Prasthutha|

►ಧರ್ಮಗಳು ಮಾನವನ ಉದ್ಧಾರಕ್ಕಾಗಿ ಇದೆಯೇ ಹೊರತಾಗಿ ಸಂಘರ್ಷಕ್ಕಾಗಿ ಅಲ್ಲ

- Advertisement -

ಬೆಂಗಳೂರು:  ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಮಾನ ಅವಕಾಶಗಳು ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಷ್ಟ್ರೀಯ ಬಸವ ಪ್ರತಿಷ್ಠಾನ ಇಂದು ಹಮ್ಮಿಕೊಂಡಿದ್ದ ಸರ್ವಧರ್ಮ ಸಂಸತ್ 2022 ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

- Advertisement -

ಬದಲಾವಣೆ ತರಲು ಸಮಾನ ಅವಕಾಶಗಳನ್ನು ನೀಡಿದಾಗ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರು ಮೇಲೆ ಬರುತ್ತಾರೆ. ಆ ಅವಕಾಶವೇ ಇಲ್ಲದಿದ್ದರೆ, ತುಳಿತಕ್ಕೆ ಒಳಪಟ್ಟರೆ, ತಲೆಮಾರುಗಳು ಕಷ್ಟಪಡುವಂತಾದರೆ ಎಂದಿಗೂ ಆರೋಗ್ಯಕರ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ ಎಂದರು. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯಲ್ಲಿ ಹೆಚ್ಚಳ ಮಾಡುವ ಅವಕಾಶ ಹಾಗೂ ಸಂಕಲ್ಪವನ್ನು ಎಲ್ಲಾ ಹಿರಿಯರು ಆಶೀರ್ವಾದ ಮಾಡಿ ಕೊಟ್ಟಿದ್ದಾರೆ ಎಂದು ಭಾವಿಸುವುದಾಗಿ ಮುಖ್ಯಮಂತ್ರಿ  ತಿಳಿಸಿದರು.

ನಮ್ಮೆಲ್ಲರ ಪ್ರಯತ್ನ ಮನುಷ್ಯನಿಂದ ಮಾನವನೆಡೆಗೆ ಹೋಗುವತ್ತ ಇರಬೇಕು. ಧರ್ಮ ಮನುಷ್ಯನನ್ನು ಮಾನವನೆಡೆಗೆ ಕೊಂಡೊಯ್ಯುವ ವಾಹನ. ಇದನ್ನು ನಾವು ಅರ್ಥಮಾಡಿಕೊಂಡಾಗ ನಮ್ಮ ನಾಡು, ದೇಶ ಹಾಗೂ ಜಗತ್ತು ಅತ್ಯಂತ ಪ್ರೀತಿ, ವಿಶ್ವಾಸದಿಂದ ಕೂಡಿರುತ್ತದೆ. ನಮ್ಮ ದೇಶಕ್ಕೆ ಚಾರಿತ್ರ್ಯದ  ಅಗತ್ಯವಿದೆ. ದೇಶದ ಸಂಸ್ಕೃತಿ, ಪರಂಪರೆ ಮತ್ತು ಪ್ರತಿ ನಾಗರಿಕನ ಚರಿತ್ರೆಯ ಮೇಲೆ ದೇಶ ತನ್ನ ಮೌಲ್ಯಗಳನ್ನು ಹೆಚ್ಚಿಸಿ ಕೊಳ್ಳುತ್ತದೆ ಎಂದರು.

ಸಮಾನತೆ ತರುವ ಕಾಲ ಕೂಡಿ ಬಂದಿದೆ

ಎಲ್ಲರಿಗೂ ಸಮಾನ ಅವಕಾಶ, ಗೌರವ, ಮತ್ತು ಕಾಯಕ ನಿಷ್ಠೆಯ ಬದುಕನ್ನು ಬಸವಣ್ಣ ಸಾರಿದ್ದಾರೆ. ಧರ್ಮದಲ್ಲಿ ಸಮಾನತೆ ಮಾತ್ರವಲ್ಲ, ಲಿಂಗ ಭೇದ ಮರೆತು ಅಲ್ಲಿಯೂ ಸಮಾನತೆ ತರುವ ಅಗತ್ಯವಿದೆ.  ಕೌಟುಂಬಿಕ ಸಮಾನತೆಯಿಂದ ಹಿಡಿದು ಮಾನವಕುಲಕ್ಕೆ ಸಮಾನತೆ ತರಬೇಕಿದೆ. ವೃತ್ತಿ ಗೌರವದ ಜೊತೆಗೆ ಮೇಲು ಕೀಳು ಇಲ್ಲದಿರುವುದು ಅಗತ್ಯ. ಜ್ಞಾನಕ್ಕೆ ಜಾತಿ, ಧರ್ಮ ಇಲ್ಲ.  ಕಾಯಕ ಸಮುದಾಯಗಳು ತುಳಿತಕ್ಕೆ ಒಳಗಾದ ಸಂದರ್ಭದಲ್ಲಿ ಬಸವಣ್ಣ ಕೈಗೊಂಡ ವೈಚಾರಿಕ ಕ್ರಾಂತಿ, ಸಾಮಾಜಿಕ ಕ್ರಾಂತಿಯಾಗಿ ಬದಲಾಯಿತು. ತನ್ನನ್ನು ತಾನೇ ಇದಕ್ಕೆ ಅರ್ಪಿಸಿಕೊಳ್ಳುವ ಪ್ರಸಂಗ ಬಂದರೂ ಹಿಂದೆ ಮುಂದೆ ನೋಡಲಿಲ್ಲ. ಸಮಾಜದಲ್ಲಿ ಮತ್ತೊಮ್ಮೆ ಸಂಘರ್ಷ ದೂರ ಮಾಡಿ  ಸಮಾನತೆ ತರುವ ಕಾಲ ಕೂಡಿ ಬಂದಿದೆ ಎಂದರು.

ಶಿಫಾರಸ್ಸುಗಳ ಅನುಷ್ಠಾನ

ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ನೇತೃತ್ವದ ಸಮಿತಿ ಶಿಫಾರಸ್ಸುಗಳನ್ನು ಒಪ್ಪಿ ಇಂದು ಅನುಮೋದನೆ ನೀಡುತ್ತಿದ್ದೇವೆ.  ವರದಿಯಲ್ಲಿರುವ  ಶಿಫಾರಸ್ಸುಗಳು ಇಂದಿನ ಸಭೆಗೆ ಪೂಜ್ಯರ ವಿಚಾರಗಳಿಗೆ ಸೂಕ್ತವಾಗಿವೆ. ನಿರ್ಣಯ ತೆಗೆದುಕೊಂಡ 24 ಗಂಟೆಗಳಲ್ಲಿ ನಾಗಮೋಹನ್ ದಾಸ್ ಅವರನ್ನು  ಭೇಟಿಯಾದಾಗ ನಾನು ಭಾವುಕನಾದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ದೊಡ್ಡ ನಗರಗಳಲ್ಲಿ  ಸರ್ವ ಧರ್ಮ ಸಮ್ಮೇಳನಗಳ ಅಗತ್ಯವಿದೆ

ಸಮ್ಮೇಳನಗಳಿಗೆ ಬಂದಾಗ ಒಂದು ಅಂಶವಾದರೂ ಒಳ್ಳೆಯದು ಪಡೆಯಬೇಕು. ಆಗ  ಸಾರ್ಥಕತೆ ಬರುತ್ತದೆ. ಬಸವ ಪ್ರತಿಷ್ಠಾನ ಉತ್ತಮ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ.  ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿ  ಸಮ್ಮೇಳನಗಳ ಅಗತ್ಯವಿದೆ ಎಂದರು.  ಮನುಷ್ಯರ ನಡುವೆ ಸಂಬಂಧಗಳು ಕಡಿಮೆ ಯಾಗುತ್ತಿರುವ ನಗರಗಳಲ್ಲಿ ಇದರ ಅವಶ್ಯಕತೆ  ಬಹಳ ಇದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

ಧರ್ಮಗಳು ಮಾನವನ ಉದ್ಧಾರಕ್ಕಾಗಿ ಇದೆಯೇ ಹೊರತಾಗಿ ಸಂಘರ್ಷಕ್ಕಾಗಿ ಅಲ್ಲ

ಹುಟ್ಟುವಾಗ ನಮಗೆ ಯಾವುದೇ ಧರ್ಮ ಇರುವುದಿಲ್ಲ.  ಜಗತ್ತನ್ನು ಬಿಟ್ಟು ಹೋಗುವಾಗಲೂ ಯಾವುದೇ ಧರ್ಮ ಇರುವುದಿಲ್ಲ. ಆದರೆ ಬದುಕಿನಲ್ಲಿ ನಾವು ಹಲವಾರು ಧರ್ಮಕ್ಕೆ ಸೇರುತ್ತೇವೆ. ನಂತರ ಜಾತಿ, ಉಪಜಾತಿ, ಪಂಗಡಕ್ಕೆ ಸೇರುತ್ತೇವೆ. ಇವೆಲ್ಲವೂ ಸಾಮಾಜಿಕ ವ್ಯವಸ್ಥೆ ಯಾಗಿ ನಾವು ಮನುಜರು ಕಾಲಕಾಲಕ್ಕೆ ಮಾಡಿಕೊಂಡಿರುವ  ವ್ಯವಸ್ಥೆ. ಇದು ಸರಿ ತಪ್ಪು ಅನ್ನುವುದಕ್ಕಿಂತ ವ್ಯವಸ್ಥೆ ಅವಶ್ಯಕತೆ ಮತ್ತು ಅದರ ವ್ಯಾಪ್ತಿ ಎಷ್ಟಿರಬೇಕೆನ್ನುವುದು ಬಹಳ ಮುಖ್ಯ.  ಮನುಷ್ಯ ಸಾಮಾಜಿಕ ಜೀವಿ. ಗುಂಪು, ನಗರಗಳಲ್ಲಿ ಬದುಕುತ್ತಾನೆ.   ಧರ್ಮಗಳು ಮಾನವನ ಉದ್ಧಾರಕ್ಕಾಗಿ ಇದೆಯೇ ಹೊರತಾಗಿ ಸಂಘರ್ಷಕ್ಕಾಗಿ ಅಲ್ಲ. ಯಾವ ಧರ್ಮ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆಯೋ ಅದು ಧರ್ಮವೇ ಅಲ್ಲ ಎಂದರು.

ಕಾಯಕದಿಂದ ಸಮಾನತೆ

ಬಸವಣ್ಣನವರು ನಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ಬಹಳ ಸುಲಭವಾಗಿ ಪರಿಹಾರ ನೀಡಿದ್ದಾರೆ.  ‘ದಯವಿಲ್ಲದ ಧರ್ಮ ಅದಾವುದಯ್ಯ’ ಎಂದು ಒಂದೇ ವಾಕ್ಯದಲ್ಲಿ ತಿಳಿಸಿದ್ದಾರೆ.  ನಮ್ಮ  ಅಸ್ತಿತ್ವವನ್ನು ಶುದ್ಧವಾಗಿಟ್ಟುಕೊಳ್ಳುವ ವಿಧಾನವನ್ನು ಕಳಬೇಡ, ಕೊಳಬೇಡ, ಹುಸಿಯ ನುಡಿಯಲು ಬೇಡ ಎಂದು ಸರಳವಾಗಿ ತಿಳಿಸಿದ್ದಾರೆ. ಕಾಯಕವೇ ಕೈಲಾಸ ಎಂದು ಬದುಕುವ ಮಂತ್ರವನ್ನು ಹೇಳಿಕೊಟ್ಟಿದ್ದಾರೆ. ಅವನ್ನು ಅರಿತು,ಅನುಕರಿಸಿ, ಅಳವಡಿಸಿಕೊಳ್ಳಬೇಕಿದೆ.

ಪೂಜೆಗಿಂತ ಕಾಯಕ ದೊಡ್ಡದು ಎಂದ ಬಸವಣ್ಣ ಸ್ವಾವಲಂಬಿ ಹಾಗೂ ಜೀವನವನ್ನು ಕಾಯಕದಿಂದ  ಕಟ್ಟಿಕೊಳ್ಳಲು ಸಾಧ್ಯ. ಅಂಥ ಕಡೆ ಸಮಾನತೆ ಇರುತ್ತದೆ. ಸಮಾನತೆಯಿದ್ದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು.

ಸಮ್ಮೇಳನದ ನಿರ್ಣಯಗಳು ಪ್ರಕಟ ವಾಗಲಿ

ಸಮ್ಮೇಳನದಲ್ಲಿ ಆಗುವ ನಿರ್ಣಯಗಳನ್ನು ಮುದ್ರಿಸಿ ಹಂಚುವ ಕೆಲಸವಾಗಬೇಕು. ಇದು ಜಗತ್ತಿಗೆ ತಿಳಿಯಬೇಕು. ಸಮ್ಮೇಳನದ ಜೀವಾಳ ಮುಂದುವರಿಯಬೇಕು. ಮುಂದಿನ ವರ್ಷದೊಳಗೆ ಪ್ರಗತಿ ಕಾಣವಂತಾಗಬೇಕು ಎಂದರು.



Join Whatsapp