ಟಿ20 ವಿಶ್ವಕಪ್‌ ಚರಿತ್ರೆಯಲ್ಲೇ ಮೊದಲ ಬಾರಿಗೆ ಪ್ರಧಾನ ಹಂತ ಪ್ರವೇಶಿಸಿದ ಜಿಂಬಾಬ್ವೆ

Prasthutha|

ನಾಯಕ ಕ್ರೇಗ್ ಎವೈನ್ ಅರ್ಧಶತಕ ಮತ್ತು ಸಿಕಂದರ್ ರಜಾ (23 ಎಸೆತಗಳಲ್ಲಿ 40 ರನ್‌) ಅಮೋಘ ಬ್ಯಾಟಿಂಗ್‌ ನೆರವಿನಿಂದ ಸ್ಕಾಟ್ಲೆಂಡ್‌ ತಂಡವನ್ನು ಮಣಿಸಿದ ಜಿಂಬಾಬ್ವೆ, ಟಿ20 ವಿಶ್ವಕಪ್‌ ಟೂರ್ನಿಯ ಪ್ರಧಾನ ಹಂತ, ಸೂಪರ್‌ 12ಕ್ಕೆ ಅರ್ಹತೆ ಪಡೆದಿದೆ. 

- Advertisement -

ಸ್ಕಾಟ್ಲೆಂಡ್‌ ತಂಡ ನೀಡಿದ್ದ 133 ರನ್‌ಗಳ ಗುರಿಯನ್ನು 1.3 ಓವರ್‌ಗಳು ಬಾಕಿ ಇರುವಂತೆಯೇ 5 ವಿಕೆಟ್‌ ನಷ್ಟದಲ್ಲಿ ಬೆನ್ನಟ್ಟಿದ ಜಿಂಬಾಬ್ವೆ, ಟಿ20 ವಿಶ್ವಕಪ್‌ ಚರಿತ್ರೆಯಲ್ಲೇ ಮೊದಲ ಬಾರಿಗೆ ಪ್ರಧಾನ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಈ ಕಾರಣಕ್ಕಾಗಿ ತಂಡದ ಸದಸ್ಯರು ಮತ್ತು ಅಭಿಮಾನಿಗಳು ವಿಶ್ವಕಪ್‌ ಗೆದ್ದಷ್ಟೇ ರೀತಿಯಲ್ಲಿ ಸಂಭ್ರಮಿಸಿತು.

ಈ ಗೆಲುವಿನೊಂದಿಗೆ ಅರ್ಹತಾ ಸುತ್ತಿನ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ ಜಿಂಬಾಬ್ವೆ ಅಗ್ರಸ್ಥಾನ ಪಡೆಯಿತು. ಆ ಮೂಲಕ ಸೂಪರ್‌ 12 ಹಂತದಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ ತಂಡಗಳನ್ನು ಒಳಗೊಂಡ ಗುಂಪು 2ರಲ್ಲಿ ಸ್ಥಾನ ಪಡೆದಿದೆ.

- Advertisement -

ಹೋಬರ್ಟ್‌ನ ಬೆಲ್ಲೆರಿವ್ ಓವಲ್‌ ಮೈದಾನದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಸ್ಕಾಟ್ಲೆಂಡ್‌, ಆರಂಭಿಕ ಜಾರ್ಜ್ ಮುನ್ಸಿ ಅರ್ಧಶತಕ (54) ನೆರವಿನಿಂದ 6 ವಿಕೆಟ್‌ ನಷ್ಟದಲ್ಲಿ 132 ರನ್‌ಗಳಿಸಿತ್ತು. ಚೇಸಿಂಗ್‌ ವೇಳೆ ಜವಾಬ್ಧಾರಿಯುತ ಬ್ಯಾಟಿಂಗ್‌ ನಡೆಸಿದ ಜಿಂಬಾಬ್ವೆ ನಾಯಕ ಕ್ರೇಗ್ ಎವೈನ್ 54 ಎಸೆತಗಳಲ್ಲಿ 6 ಬೌಂಡರಿ ನೆರವಿನೊಂದಿಗೆ 58 ರನ್‌ಗಳಿಸಿ ನಿರ್ಗಮಿಸಿದರು. ಐದನೇ ಕ್ರಮಾಂಕದಲ್ಲಿ ಬಂದ ಸಿಕಂದರ್ ರಝಾ, ಬಿರುಸಿನ ಬ್ಯಾಟಿಂಗ್‌ ನಡೆಸಿ 23 ಎಸೆತಗಳಲ್ಲಿ 40 ರನ್‌ ಕಲೆ ಹಾಕಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಇವರಿಬ್ಬರ ನಡುವಿನ 64 ರನ್‌ಗಳ ಅಮೂಲ್ಯ ಜೊತೆಯಾಟ ಪಂದ್ಯದ ಪ್ರಮುಖ ಟರ್ನಿಂಗ್‌ ಪಾಯಿಂಟ್ ಆಯಿತು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಐರ್ಲೆಂಡ್, ಅಚ್ಚರಿ ಎಂಬಂತೆ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಸೂಪರ್ 12ಕ್ಕೆ ಅರ್ಹತೆ ಪಡೆದಿದೆ. ಆ ಮೂಲಕ ಆಸ್ಟ್ರೇಲಿಯ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳನ್ನು ಒಳಗೊಂಡ ಗುಂಪು 1ರಲ್ಲಿ ಸ್ಥಾನ ಪಡೆಯಿತು.



Join Whatsapp