ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ದಿನವೇ ಇಂಗ್ಲೆಂಡ್ ವಿಶ್ವದಾಖಲೆ

Prasthutha|

ಪಾಕಿಸ್ತಾನದ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌, ಮೊದಲ ದಿನವೇ ವಿಶ್ವದಾಖಲೆ ನಿರ್ಮಿಸಿದೆ.

- Advertisement -

ರಾವಲ್ಪಿಂಡಿಯಲ್ಲಿ ಗುರುವಾರ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ಶತಕಗಳ ಮೂಲಕ ಅಬ್ಬರಿಸಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಬೆನ್ ಸ್ಟೋಕ್ಸ್‌ ಬಳಗ, ನಾಲ್ಕು ವಿಕೆಟ್ ಕಳೆದುಕೊಂಡು ಬರೋಬ್ಬರಿ 506 ರನ್ ಗಳಿಸಿದೆ. ಇದಕ್ಕಾಗಿ ಎದುರಿಸಿದ್ದು 75 ಓವರ್‌ (450 ಎಸೆತ). ಏಕದಿನ ಮಾದರಿಯಲ್ಲಿ ಓವರ್‌ಗೆ 6.75 ಸರಾಸರಿಯಲ್ಲಿ ರನ್‌ ಚಚ್ಚಿದ್ದಾರೆ. ಈ ಮೂಲಕ ಟೆಸ್ಟ್‌ ಪಂದ್ಯಗಳ ಇತಿಹಾಸದಲ್ಲೇ ಮೊದಲ ದಿನ 500+ ರನ್‌ ಗಳಿಸಿದ ಮೊದಲ ತಂಡ ಎಂಬ ದಾಖಲೆ ಇಂಗ್ಲೆಂಡ್‌ ಪಾಲಾಗಿದೆ.

ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಭರ್ಜರಿ ಶತಕಗಳಿಸುವ ಮೂಲಕ ಪಾಕಿಸ್ತಾನ ಬಲಿಷ್ಠ ಬೌಲಿಂಗ್‌ ಪಡೆಯನ್ನು ಹೇಳ ಹೆಸರಿಲ್ಲದ ರೀತಿಯಲ್ಲಿ ದಂಡಿಸಿದರು.
ಆರಂಭಿಕರಾದ ಝಾಕ್ ಕ್ರಾಲಿ 122 ರನ್‌ (111 ಎಸೆತ, 21 ಬೌಂಡರಿ), ಬೆನ್ ಡಕೆಟ್ 107 ರನ್‌(110 ಎಸೆತ, 15 ಬೌಂಡರಿ), ಮೊದಲ ವಿಕೆಟ್‌ಗೆ 233 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರೆ, ಓಲಿ ಪೋಪ್ 108 ರನ್‌ಗಳಿಸಿ (104 ಎಸೆತ, 14 ಬೌಂಡರಿ) ನಿರ್ಗಮಿಸಿದರು.
ಐದನೇ ಕ್ರಮಾಂಕದಲ್ಲಿ ಬಂದ ಹ್ಯಾರಿ ಬ್ರೂಕ್ ಅಜೇಯ 101 ರನ್‌(81 ಎಸೆತ, 14 ಬೌಂಡರಿ, 2 ಸಿಕ್ಸರ್) ಮತ್ತು ನಾಯಕ ಬೆನ್‌ಸ್ಟೋಕ್ಸ್‌ 34 ರನ್‌ಗಳಿಸಿದ್ದು, ಶುಕ್ರವಾರ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

- Advertisement -

ಪಾಕ್‌ ಪರ ಬೌಲಿಂಗ್‌ನಲ್ಲಿ ಜಾಹಿದ್ ಮಹಮೂದ್ 23 ಓವರ್‌ ಎಸೆದು 160 ರನ್‌ ನೀಡಿ 2 ವಿಕೆಟ್‌ ಪಡೆದರೆ, ಹಾರಿಸ್‌ ರೌಫ್‌ ಮತ್ತು ಮುಹಮ್ಮದ್‌ ಅಲಿ ತಲಾ 1 ವಿಕೆಟ್‌ ಹಂಚಿಕೊಂಡರು.



Join Whatsapp