ಮಾನವ ಹಕ್ಕು ಉಲ್ಲಂಘನೆಗೆ ಕೊನೆ ಎಂದು?

Prasthutha|

ಮಾನವ ಹಕ್ಕು ಪ್ರಸಕ್ತ ಜಗತ್ತಿನಲ್ಲಿ ವ್ಯಾಪಕ ಚರ್ಚೆಗೊಳಗಾಗುತ್ತಿರುವ ವಿಷಯ. ವಿಶ್ವಸಂಸ್ಥೆಯ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜನಾಂಗ, ಬಣ್ಣ, ಧರ್ಮ, ಲಿಂಗ, ಭಾಷೆ, ರಾಜಕೀಯ, ರಾಷ್ಟ್ರೀಯ ಮತ್ತು ಜನನ ಮುಂತಾದ ವಿಷಯಗಳಲ್ಲಿ ಯಾವುದೇ ತಾರತಮ್ಯಕ್ಕೆ ಒಳಗಾಗದೆ ಒಬ್ಬ ಮನುಷ್ಯನಾಗಿ ಬದುಕುವ ಎಲ್ಲಾ ಹಕ್ಕುಗಳಿಗೆ ಅರ್ಹನಾಗಿದ್ದಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಧರ್ಮ, ಭಾಷೆ, ರಾಜಕೀಯ, ರಾಷ್ಟ್ರೀಯತೆಯ ಹೆಸರಿನಲ್ಲಿ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವ ಕೃತ್ಯಗಳು ವಿಜೃಂಭಿಸುತ್ತಿವೆ. ಪೊಲೀಸ್, ಸೇನೆ, ಸರ್ಕಾರ ಅತಿ ಹೆಚ್ಚು ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಸಂಸ್ಥೆಗಳು ಎಂಬ ಕುಖ್ಯಾತಿಗೆ ಒಳಗಾಗಿವೆ.

ಭಾರತ ಮಾನವ ಹಕ್ಕುಗಳ ಸೂಚ್ಯಂಕದಲ್ಲಿ ತೀವ್ರ ಗತಿಯ ಕುಸಿತ ಕಂಡಿದೆ. ಸಂವಿಧಾನ ಕೊಡ ಮಾಡಿದ ಅಭಿವ್ಯಕ್ತಿ ಸ್ವಾತಂತ್ರ್ಯ, ಜೀವಿಸುವ ಹಕ್ಕು, ತನಗೆ ಬೇಕಾದ ಧರ್ಮವನ್ನು ಸ್ವೀಕರಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಮುಂತಾದ ಹಕ್ಕುಗಳು ನಿರಂತರವಾಗಿ ದಾಳಿಗೊಳಗಾಗುತ್ತಿರುವುದು ಭಾರತೀಯ ಸಮಾಜದಲ್ಲಿ ಸಹಜ ಎಂಬಂತಾಗಿದೆ. ಕರಾಳ ಕಾನೂನುಗಳ ಮೂಲಕ ಸರ್ಕಾರ ತನ್ನ ಪ್ರಜೆಗಳನ್ನೇ ಕೊಲ್ಲುವ, ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡುವ ಕೃತ್ಯಗಳು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯೇ ಆಗಿವೆ. ಭಿನ್ನ ಧ್ವನಿಗಳನ್ನು ಎತ್ತಿದ ಕಾರಣ ಅಥವಾ ಸರ್ಕಾರದ ನೀತಿಗಳ ಪರವಾಗಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಗಳ ಮೇಲೆ ಕಾನೂನು ದುರ್ಬಳಕೆ ಮಾಡಿಕೊಂಡು ಕ್ರೌರ್ಯ ಮೆರೆಯುತ್ತಿರುವುದು ಇಂದಿನ ಸಮಾಜದಲ್ಲಿ ದಿನನಿತ್ಯದ ಬೆಳವಣಿಗೆಗಳಾಗಿ ಕಂಡುಬರುತ್ತಿದೆ. ಮಾನವ ಹಕ್ಕುಗಳನ್ನು ಕಾಪಾಡಬೇಕಾದ, ಅವುಗಳು ಉಲ್ಲಂಘನೆಯಾಗದಂತೆ ತಡೆಯಬೇಕಾದ ಪೊಲೀಸ್ ಠಾಣೆಗಳೇ ಇಂದು ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯ ಕೇಂದ್ರಗಳಾಗಿರುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆಯಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಬರುವ ಹೆಚ್ಚಿನ ದೂರುಗಳು ಪೊಲೀಸರ ವಿರುದ್ಧವಾಗಿವೆ ಎಂಬುದು ವಾಸ್ತವ. 2015ರಿಂದ ಇದುವರೆಗೆ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ 5 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಇವುಗಳ ಪೈಕಿ ಅತಿಹೆಚ್ಚು ಅಂದರೆ 1.4 ಲಕ್ಷಕ್ಕೂ ಹೆಚ್ಚು ದೂರುಗಳು ಪೊಲೀಸರ ವಿರುದ್ಧವೇ ದಾಖಲಾಗಿವೆ. ಪ್ರಸಕ್ತ ವರ್ಷದಲ್ಲಿ 64,170ಪ್ರಕರಣಗಳು ದಾಖಲಾಗಿವೆ. ಅರಾಜಕತೆಗೆ ಕುಖ್ಯಾತಿ ಪಡೆದಿರುವ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ದೇಶದ ಒಟ್ಟು ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ಪೈಕಿ ಶೇಕಡಾ 40ರಷ್ಟು ಪ್ರಕರಣಗಳು ಉತ್ತರ ಪ್ರದೇಶವೊಂದರಲ್ಲೇ ದಾಖಲಾಗುತ್ತಿವೆ. ಸತತ ಮೂರು ವರ್ಷಗಳಲ್ಲಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶ ಮಾನವ ಹಕ್ಕು ಉಲ್ಲಂಘನೆಯಲ್ಲಿ ಮೊದಲ ಸ್ಥಾನದಲ್ಲಿದೆ.

ಕರ್ನಾಟಕ ಕೂಡ ಐದನೇ ಸ್ಥಾನದಲ್ಲಿರುವುದು ಕಳವಳಕಾರಿಯಾಗಿದೆ. ಇತ್ತೀಚೆಗೆ ವಿಚಾರಣೆಯ ನೆಪದಲ್ಲಿ ಮುಸ್ಲಿಮ್ ಯುವಕನೊಬ್ಬನಿಗೆ ಠಾಣೆಯಲ್ಲಿ ಕ್ರೂರವಾಗಿ ಹಿಂಸಿಸಿ ಆತ ಕೈ ಕಳೆದುಕೊಳ್ಳುವಂತೆ ಮಾಡಿದ ಅಮಾನವೀಯ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮತ್ತೊಂದು ಪೊಲೀಸ್ ಠಾಣೆಯಲ್ಲಿ ಮುಸ್ಲಿಮ್ ಯುವಕನ ಗಡ್ಡ ಕತ್ತರಿಸಿ ಮೂತ್ರ ಕುಡಿಯುವಂತೆ ಹಿಂಸಿಸಿದ ಆಘಾತಕಾರಿ ಘಟನೆಯೂ ನಡೆದಿದೆ. ಪೊಲೀಸ್ ಠಾಣೆಗಳು ಸಾರ್ವಜನಿಕರ ಪಾಲಿಗೆ ನರಕಸದೃಶವಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾಯಕಾರಿ ಬೆಳವಣಿಗೆಯಾಗಿದೆ. ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಕೆಳಹಂತದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಜನರ ಕಣ್ಣಿಗೆ ಮಣ್ಣೆರಚಲಾಗಿದೆ. ಇಂತಹ ಪ್ರಕರಣಗಳು ದೇಶಾದ್ಯಂತ ಪೊಲೀಸ್ ಠಾಣೆಗಳಲ್ಲಿ ನಡೆಯುತ್ತಿದ್ದರೂ ಕೆಲವೊಂದು ಮಾತ್ರ ಬೆಳಕಿಗೆ ಬರುತ್ತಿದೆ. ಸೇನೆ ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಹಿಂದೆ ಬಿದ್ದಿಲ್ಲ. ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಸೇನೆಯ ಹಿಂಸೆ ಭಯಾನಕವಾಗಿದೆ. ಇತ್ತೀಚೆಗೆ ನಾಗಾಲ್ಯಾಂಡ್ ನಲ್ಲಿ ಸೈನಿಕರು 14 ಮಂದಿ ಅಮಾಯಕ ಕೂಲಿ ಕಾರ್ಮಿಕರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಸೈನಿಕರಿಗೆ ಕಾನೂನಿನ ರಕ್ಷಣೆ ಇರುವುದರಿಂದ ಈ ಬಡ ಕಾರ್ಮಿಕರ ಸಾವಿಗೆ ನ್ಯಾಯ ಸಿಗುವ ಸಾಧ್ಯತೆ ಕ್ಷೀಣವಾಗಿದೆ. ಮಾನವ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವ ಸರ್ಕಾರ, ನಾಗರಿಕರಿಗೆ ಸಾಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ನಿರ್ಭೀತಿಯಿಂದ ಅನುಭವಿಸುವ ವಾತಾವರಣ ನಿರ್ಮಿಸಬೇಕು. ಆದರೆ ಪ್ರಸಕ್ತ ಸರಕಾರದ ಕಾರ್ಯನೀತಿಗಳು ನಾಗರಿಕರ ಹಿತಾಸಕ್ತಿಗೆ ವಿರುದ್ಧವಾಗಿರುವುದು ಕಂಡು ಬರುತ್ತಿದೆ. ಮಾನವ ಹಕ್ಕುಗಳೆಂದರೆ ನಾಗರಿಕನ ಮೂಲಭೂತ ಹಕ್ಕುಗಳೇ ಆಗಿವೆ. ಆಡಳಿತ ಯಂತ್ರಾಂಗದಿಂದ ಇದರ ಉಲ್ಲಂಘನೆ ನಡೆಯುವುದಾದರೆ, ಅವುಗಳ ರಕ್ಷಣೆಗೆ ಸ್ವತಃ ನಾಗರಿಕರು ಪ್ರಜಾಸತ್ತಾತ್ಮಕವಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗಿರುವುದು ಅನಿವಾರ್ಯವಾಗಿದೆ.

- Advertisement -