ಬೆಳಗಾವಿ: ರಾಜ್ಯದಲ್ಲಿ ಶೀಘ್ರದಲ್ಲೇ ಅತ್ಯಂತ ರಚನಾತ್ಮಕವಾದ
ಉದ್ಯೋಗ ನೀತಿ’ಯನ್ನು ಜಾರಿಗೆ ತರಲಾಗುವುದು. ಈ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ಕೊಡುತ್ತಿದ್ದು, ನಿರುದ್ಯೋಗ ಸಮಸ್ಯೆ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಲ್ಲಿನ ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ ಸರ್ವರಿಗೂ ಉದ್ಯೋಗ ಕಾರ್ಯಕ್ರಮ ಲೋಕಾರ್ಪಣೆ ಮತ್ತು
ಉದ್ಯೋಗ ಮೇಳ’ವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ಇದುವರೆಗೂ ಉದ್ಯೋಗದಾತರಿಗೆ ಒಂದು ಸಾಮಾನ್ಯ ಸೂತ್ರದಡಿ ಪ್ರೋತ್ಸಾಹ ಮತ್ತು ಉತ್ತೇಜಕ ಭತ್ಯೆಗಳನ್ನು ಕೊಡಲಾಗುತ್ತಿತ್ತು. ಆದರೆ ಇನ್ನುಮುಂದೆ ಯಾವ ಸಂಸ್ಥೆಯು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ ಎನ್ನುವುದನ್ನು ಆಧರಿಸಿ ಪ್ರೋತ್ಸಾಹ ಕೊಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ, ಕೌಶಲ್ಯ ಪೂರೈಕೆ ಮತ್ತು ಉದ್ಯೋಗ ಸೃಷ್ಟಿ ಈ ಮೂರೂ ಅಂಶಗಳು ಒಂದರ ಜೊತೆಯಲ್ಲಿ ಇನ್ನೊಂದಿರುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಶಿಕ್ಷಣ ಕ್ರಮವನ್ನು ಉದ್ಯೋಗದಾತ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಬೆಸೆಯಲಾಗಿದೆ. ಇನ್ನೊಂದೆಡೆಯಲ್ಲಿ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಜಾಗತಿಕ ಮಟ್ಟದ ಶೈಕ್ಷಣಿಕ ವಾತಾವರಣದೊಂದಿಗೆ ಬೆಸೆಯಲಾಗುತ್ತಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳು ಹತ್ತಾರು ಒಡಂಬಡಿಕೆಗಳನ್ನು ಮಾಡಿಕೊಂಡಿವೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, ಪ್ರತಿಯೊಬ್ಬ ವಿದ್ಯಾವಂತರಿಗೂ ಅವರಿಗೆ ಆಸಕ್ತಿ ಇರುವಂತಹ ಉದ್ಯೋಗಗಳೇ ದೊರಕುವಂತಾಗಬೇಕು ಎನ್ನುವುದು ಸರಕಾರದ ಸಂಕಲ್ಪವಾಗಿದ್ದು, ಈ ಮಹತ್ತ್ವಾಕಾಂಕ್ಷೆಯಿಂದಲೇ ಸಕಲರಿಗೂ ಉದ್ಯೋಗ’ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಬೆಳಗಾವಿಯಲ್ಲಿ ಈಗಾಗಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕೇಂದ್ರ ಕಚೇರಿ ಇದೆ. ರಾಜ್ಯದ ಒಟ್ಟು 6 ವಿ.ವಿ.ಗಳನ್ನು
ಯೂನಿವರ್ಸಿಟಿ ಆಫ್ ಎಮಿನೆನ್ಸ್’ ಮಟ್ಟಕ್ಕೆ ಮತ್ತು 7 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ವಿಟಿಯು ಅಭಿವೃದ್ಧಿಗೆ ಸಂಬಂಧಿಸಿದ ಕ್ರಿಯಾ ಯೋಜನೆಯು ಒಂದು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಶಶಿಕಲಾ ಜೊಲ್ಲೆ, ಬಸವರಾಜ ಭೈರತಿ, ಶಾಸಕ ಅಭಯ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.