UAEಯಲ್ಲಿ ಇನ್ನು ಮುಂದೆ ಒಂದಕ್ಕಿಂತ ಹೆಚ್ಚು ಉದ್ಯೋಗಗಳನ್ನು ಮಾಡುವ ಅವಕಾಶ : ಹೊಸ ಕಾನೂನು ರಚನೆ

Prasthutha|

ಯುನೈಟೆಡ್ ಅರಬ್ ಎಮಿರೇಟ್ಸ್ ಕಾರ್ಮಿಕ ಕಾನೂನುಗಳಲ್ಲಿ ಹೊಸ ತಿದ್ದುಪಡಿಗಳನ್ನು ಮಾಡುತ್ತಿದೆ. ಅದರ ಪ್ರಕಾರ ಉದ್ಯೋಗಿಗಳು ಇನ್ನು ಮುಂದೆ ಒಂದಕ್ಕಿಂತ ಹೆಚ್ಚು ಉದ್ಯೋಗದಾತರೊಂದಿಗೆ ಕೆಲಸ ಮಾಡಲು ಹೊಸ ಕಾನೂನು ನೆರವಾಗಲಿದೆ. ಈ ತಿದ್ದುಪಡಿ ಮಾಡಿರುವ ಹೊಸ ಕಾನೂನು ಫೆಬ್ರವರಿ 2, 2022 ರಿಂದ ಅನುಷ್ಟಾನಕ್ಕೆ ಬರಲಿದೆ.

- Advertisement -

ಕಾರ್ಮಿಕ ಸಂಬಂಧಗಳನ್ನು ನಿಯಂತ್ರಿಸುವ 2021ರ ಫೆಡರಲ್ ಕಾನೂನು ಸಂಖ್ಯೆ 33ರ ಅಡಿಯಲ್ಲಿ, ಖಾಸಗಿ ವಲಯದ ಉದ್ಯೋಗಿಗಳು ಅರೆಕಾಲಿಕ, ತಾತ್ಕಾಲಿಕ ಅಥವಾ ಹೊಂದಿಕೊಳ್ಳುವ (Flexible) ಕೆಲಸ ಹೀಗೆ ಮೂರು ವಿಭಾಗಗಳಲ್ಲಿ ಕೆಲಸ ಮಾಡಬಹುದಾಗಿದೆ. ಈ ಹೊಸ ಯೋಜನೆಯು ಉದ್ಯೋಗಿಗಳನ್ನು ಹೊಸ ಕೆಲಸಗಳಿಗೆ ತಮ್ಮನ್ನು ಪರಿಚಯಿಸುವ ಜೊತೆಗೆ, ಉದ್ಯೋಗಿಗಳ ಹಕ್ಕುಗಳನ್ನು ರಕ್ಷಿಸುತ್ತದೆ. ಇದು ಒಂದಕ್ಕಿಂತ ಹೆಚ್ಚು ಕೆಲಸದಲ್ಲಿ ತೊಡಗಿಸಿಕೊಳ್ಳಲು ಮತ್ತು ಕಾರ್ಮಿಕರ ಕೌಶಲ್ಯಗಳನ್ನು ವಿಭಿನ್ನವಾಗಿ ಬಳಸಲು ಅನುವು ಮಾಡಿಕೊಡುತ್ತದೆ.

ಹೊಸ ನಿಯಮದ ಪ್ರಕಾರ ಇರುವ ಅರೆಕಾಲಿಕ ಕೆಲಸವು ದಿನವೊಂದರಲ್ಲಿ ಉದ್ಯೋಗಿಗಳಿಗೆ ಒಂದು ಅಥವಾ ಹೆಚ್ಚು ಉದ್ಯೋಗದಾತರ ಬಳಿ  ನಿರ್ದಿಷ್ಟ ಸಂಖ್ಯೆಯ ಗಂಟೆಗಳು ಅಥವಾ ಕೆಲಸಕ್ಕೆ ನಿಗದಿಪಡಿಸಿದ ದಿನಗಳವರೆಗೆ ಕೆಲಸ ಮಾಡಲು ಅನುಮತಿ ನೀಡುತ್ತದೆ.  ಅರೆಕಾಲಿಕ ಕೆಲಸವು ನಿರ್ದಿಷ್ಟ ಅವಧಿಗೆ ಅಥವಾ ಕೆಲಸದ ಮುಕ್ತಾಯದೊಂದಿಗೆ ಕೊನೆಗೊಳ್ಳುವ ಯೋಜನೆಯ (Project Basis) ಆಧಾರದ ಮೇಲೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ.

- Advertisement -

ಹೊಂದಿಕೊಳ್ಳುವ ಅಥವಾ Flexible ಕೆಲಸವು ಉದ್ಯೋಗಿಗಳಿಗೆ ಪ್ರಸ್ತುತ ಕಾರ್ಮಿಕ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಪೂರ್ಣಕಾಲಿಕ ಕೆಲಸದ ಜೊತೆಗೆ, ಕೆಲಸದ ಪರಿಸ್ಥಿತಿಗಳು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ  ವಿವಿಧ  ಸಮಯಗಳಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ. ಹೊಸ ಕಾನೂನು ಅನುಷ್ಠಾನದ ಮೇಲ್ವಿಚಾರಣೆಗಾಗಿ ಕಾರ್ಯಕಾರಿ ನಿಬಂಧನೆಗಳನ್ನು ರೂಪಿಸಿದ ನಂತರ ಸ್ವಯಂ ಉದ್ಯೋಗ ಮತ್ತು ಸಂಕ್ಷೇಪಿತ ಕೆಲಸದ ವಾರಗಳು ಸೇರಿದಂತೆ ಕೆಲಸದ ಮತ್ತಷ್ಟು ನೀತಿ ನಿಯಮಗಳನ್ನು ರೂಪಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.  

ಈ ಹೊಸ ನಿಯಮವು ಕಾಂಟ್ರಾಕ್ಟ್ ಮುಗಿದರೂ ದೇಶದಲ್ಲಿ ಕೆಲಸವಿಲ್ಲದೆ ವಾಸಿಸುತ್ತಿರುವ ಕಾರ್ಮಿಕರನ್ನು ಸರಳ ರೀತಿಯ ನಿಯಮಾವಳಿಗಳೊಂದಿಗೆ ಮರು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ.  ಮಾತ್ರವಲ್ಲದೆ ಉದ್ಯೋಗದಾತರಿಗೆ ಕಡಿಮೆ ವೆಚ್ಚದಲ್ಲಿ ಸುಲಲಿತವಾಗಿ ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ವಿವಿಧ ವಲಯಗಳ ಕಾರ್ಮಿಕರನ್ನು ನೇಮಿಸಿಕೊಳ್ಳುವ ಅವಕಾಶ ನೀಡುತ್ತದೆ. ಹಾಗಾಗಿ ಇದು ಕಾರ್ಮಿಕರಿಗೆ ಎಷ್ಟು ಲಾಭದಾಯಕವೋ ಅದೇ ರೀತಿ ಉದ್ಯೋಗದಾತರಿಗೂ ಲಾಭದಾಯಕವಾಗಿದೆ.

Join Whatsapp