ವಾಷಿಂಗ್ಟನ್: ಸದ್ಯಕ್ಕೆ ಟ್ವಿಟರ್‌ನ ಸಿಇಒ ಆಗಿ ಸ್ವತಃ ತಾನೇ ಕಾರ್ಯನಿರ್ವಹಿಸುವುದಾಗಿ ಉದ್ಯಮಿ ಎಲಾನ್ ಮಸ್ಕ್ ತಿಳಿಸಿದ್ದಾರೆ.
ಮಸ್ಕ್ ಅವರು ತಮ್ಮ ಟ್ವಿಟರ್ ಖಾತೆಯ ಬಯೋದಲ್ಲಿ ‘ಚೀಫ್ ಟ್ವಿಟರ್’ ಎಂದು ಬದಲಿಸಿಕೊಂಡಿದ್ದಾರೆ. ಆದರೆ, ಅವರು ಎಷ್ಟು ದಿನದವರೆಗೆ ಸಿಇಒ ಆಗಿ ಮುಂದುವರಿಯಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ.
ಟ್ವಿಟರ್ ಕಂಪನಿಯನ್ನು ಮಸ್ಕ್ ಅವರು ಸುಮಾರು ₹ 3.62 ಲಕ್ಷ ಕೋಟಿಗೆ ಖರೀದಿಸಿದ್ದು, ಕಳೆದವಾರ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ.
ಮಸ್ಕ್ ಅವರು ಸದ್ಯ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ‘ಟೆಸ್ಲಾ’, ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ‘ಸ್ಪೇಸ್‌ಎಕ್ಸ್’, ಕೃತಕ ಬುದ್ಧಿಮತ್ತೆ ಸಾಧನಗಳನ್ನು ಅಭಿವೃದ್ಧಿಪಡಿಸುವ ‘ನ್ಯೂರಲಿಂಕ್’, ಸುರಂಗ ನಿರ್ಮಾಣಕ್ಕೆ ಸಂಬಂಧಿಸಿದ ‘ದಿ ಬೋರಿಂಗ್ ಕಂಪನಿ’ಯನ್ನು ಮುನ್ನಡೆಸುತ್ತಿದ್ದಾರೆ.