ಮುಂಬೈ : ಸ್ಟ್ರಾ ಮತ್ತು ಸಿಪ್ಪರ್ ಬಳಸಲು ಅನುಮತಿ ನೀಡುವಂತೆ ವಿನಂತಿಸಿದ್ದ 83ರ ಹರೆಯದ ಆದಿವಾಸಿ ಹಕ್ಕುಗಳ ಕಾರ್ಯಕರ್ತ ಸ್ತಾನ್ ಸ್ವಾಮಿ ಅರ್ಜಿಯನ್ನು ಎನ್ ಐಎ ವಿಶೇಷ ಕೋರ್ಟ್ ನಿರಾಕರಿಸಿದೆ. ತಮ್ಮ ಬಂಧನದ ವೇಳೆ ಎನ್ಐಎ ವಶಪಡಿಸಿಕೊಂಡಿದ್ದ ಸ್ಟ್ರಾ ಮತ್ತು ಸಿಪ್ಪರ್ ವಾಪಾಸ್ ಕೊಡುವಂತೆ ಸ್ವಾಮಿ ಕೋರಿದ್ದರು.
ಸ್ವಾಮಿ ಈ ಸಂಬಂಧ 20 ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ತಮಗಿರುವ ಕಾಯಿಲೆಯಿಂದಾಗಿ ತಮಗೆ ಕೈ ನಡುಕ ಬರುತ್ತದೆ. ಆಹಾರ ಸೇವಿಸುವುದು ಕಷ್ಟವಾಗುತ್ತದೆ ಎಂದು ಸ್ವಾಮಿ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸುವಂತೆ ಎನ್ ಐಎಗೆ ಕೋರ್ಟ್ ಆದೇಶಿಸಿತ್ತು.
ಬಂಧನದ ವೇಳೆ ಸ್ಟ್ರಾ ಮತ್ತು ಸಿಪ್ಪರ್ ವಶಪಡಿಸಿಕೊಂಡ ಬಗ್ಗೆ ಪಂಚನಾಮೆಯಲ್ಲಿ ದಾಖಲಿಸಿಲ್ಲ ಎನ್ ಐಎ ಪ್ರತಿಪಾದಿಸಿದೆ. ತಮಗೆ ಚಳಿಗೆ ಹೊದ್ದುಕೊಳ್ಳಲು ಚಳಿಯ ವಸ್ತ್ರ ಪೂರೈಸುವಂತೆ ಹೊಸದಾಗಿ ಸ್ವಾಮಿ ಮನವಿ ಮಾಡಿದರು.
ಆದರೆ, ಕೋರ್ಟ್ ಅದಕ್ಕೂ ಮಾನ್ಯತೆ ನೀಡದೆ, ಡಿ.4ರ ವರೆಗೆ ವಿಚಾರಣೆ ಮುಂದೂಡಿದೆ. ಅಂದು ಸ್ವಾಮಿಗೆ ಚಳಿಗೆ ವಸ್ತ್ರ ನೀಡಬೇಕೇ ಎಂಬುದರ ಬಗ್ಗೆ ವರದಿ ಸಲ್ಲಿಸಲು ಜೈಲು ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ.
ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಸ್ವಾಮಿ ಬಂಧಿತರಾಗಿದ್ದಾರೆ.