ಹೈದರಾಬಾದ್: ಆಂಧ್ರಪ್ರದೇಶದ ಕುಪ್ಪಂನಲ್ಲಿ ಹನ್ನೊಂದು ವರ್ಷದ ಚರಣ್ ಎಂಬ ಹುಡುಗ ಹುಲ್ಲು ಕತ್ತರಿಸುವ ಯಂತ್ರದಿಂದ ಮರದ ಕೋಲನ್ನು ಕತ್ತರಿಸಲು ಪ್ರಯತ್ನಿಸುತ್ತಿರುವಾಗ ಆಕಸ್ಮಿಕವಾಗಿ ಮುಂಗೈ ಕತ್ತರಿಸಿಕೊಂಡಿರುವ ಘಟನೆ ನಡೆದಿದೆ. ಮುಂಗೈ ತುಂಡಾಗಿದ್ದು ಸದ್ಯ ವೈದ್ಯರ ಪರಿಶ್ರಮದಿಂದ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ.
ಕೈ ತುಂಡಾಗಿದ್ದ ಬಾಲಕನನ್ನು ಸ್ಥಳೀಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚರಣ್ಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೆಲ್ತ್ ಸಿಟಿಗೆ ಶಿಫ್ಟ್ ಮಾಡಲಾಯಿತು. ರವಿ ಡಿ.ಆರ್ ಮತ್ತು ಸುದರ್ಶನ ರೆಡ್ಡಿ ನೇತೃತ್ವದ ವೈದ್ಯರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
“ಸದ್ಯ ಚರಣ್ನನ್ನು ಡಿಸ್ಚಾರ್ಜ್ ಮಾಡಲಾಗಿದೆ. ಅವನ ಅಳವಡಿಸಲಾದ ಕೈಯ ಸ್ಥಿತಿಯೂ ಉತ್ತಮವಾಗಿದೆ. ಇನ್ನು 9-12 ತಿಂಗಳ ಅವಧಿಯಲ್ಲಿ ಅವನು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ” ಎಂದು ವೈದ್ಯರು ತಿಳಿಸಿದ್ದಾರೆ.