ನವದೆಹಲಿ : ಎಲೆಕ್ಟ್ರೊಲ್ ಬಾಂದ್ ಯೋಜನೆಯ ದಾನಿಗಳ ಹೆಸರನ್ನು ಬಹಿರಂಗ ಪಡಿಸುವುದರಿಂದ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಾಪಾಡಿದಂತಾಗುವುದಿಲ್ಲ ಮತ್ತು ಕಾಯ್ದೆಯ ನಿಯಮಗಳನ್ನೇ ಉಲ್ಲಂಘಿಸಿದಂತಾಗುತ್ತದೆ ಎಂದು ಕೇಂದ್ರ ಮಾಹಿತಿ ಆಯೋಗ ತಿಳಿಸಿದೆ.
ಮಹಾರಾಷ್ಟ್ರ ಮೂಲದ ವಿಹಾರ್ ದುರ್ವೆ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಮಾಹಿತಿ ಆಯೋಗ ಈ ಉತ್ತರ ನೀಡಿದೆ ಎಂದು ವರದಿಯೊಂದು ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅರ್ಜಿದಾರನಿಗೆ ನೀಡಿದ್ದ ಉತ್ತರವನ್ನು ಮಾಹಿತಿ ಆಯೋಗವೂ ಎತ್ತಿಹಿಡಿದಿದೆ.
2018ರಲ್ಲಿ ಕೇಂದ್ರವು ಜಾರಿಗೊಳಿಸಿರುವ ಎಲೆಕ್ಟ್ರೊಲ್ ಬಾಂಡ್ ನೀತಿಯ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಾಗರಿಕರು ಅಥವಾ ಕಾರ್ಪೊರೇಟ್ ಸಂಸ್ಥೆಗಳು ಎಲೆಕ್ಟ್ರೊಲ್ ಬಾಂಡ್ ಗಳನ್ನು ಖರೀದಿಸಿ, ಅವುಗಳನ್ನು ರಾಜಕೀಯ ಪಕ್ಷಗಳಿಗೆ ದಾನವಾಗಿ ನೀಡಬಹುದಾಗಿದ್ದು, ಅದನ್ನು ಪಡೆದ ರಾಜಕೀಯ ಪಕ್ಷವು ಅದನ್ನು ನಗದಾಗಿ ಪರಿವರ್ತಿಸಿಕೊಳ್ಳಬಹುದು.