ವಿಜಯವಾಡ(ಆಂಧ್ರಪ್ರದೇಶ): ಎರಡು ದಿನಗಳ ಹಿಂದೆ ಹೊಸದಾಗಿ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿ ಮರುದಿನ ಸ್ಫೋಟಗೊಂಡು ಪತಿ ಮೃತಪಟ್ಟು ಪತ್ನಿ ಚಿಂತಾಜನಕ ಸ್ಥಿತಿಯಲ್ಲಿದ್ದರೆ, ಮಕ್ಕಳಿಬ್ಬರ ಸ್ಥಿತಿಯೂ ಗಂಭೀರವಾಗಿರುವ ದುರ್ಘಟನೆ ವಿಜಯವಾಡದಲ್ಲಿ ನಡೆದಿದೆ.
ಮೂರು ದಿನಗಳ ಹಿಂದಷ್ಟೇ ತೆಲಂಗಾಣದಲ್ಲೂ ಇಂತಹದ್ದೇ ಘಟನೆ ಸಂಭವಿಸಿತ್ತು. ವಿಜಯವಾಡ ನಿವಾಸಿಗಳಾದ ಶಿವಕುಮಾರ್ ದಂಪತಿ ಶುಕ್ರವಾರ ಬೂಮ್ ಮೋಟಾರ್ಸ್ ಕಂಪನಿಯ ಕಾರ್ಬೆಟ್-14 ಸ್ಕೂಟರ್ ಖರೀದಿಸಿದ್ದರು. ಶುಕ್ರವಾರ ರಾತ್ರಿ ಬೆಡ್ ರೂಮ್ನಲ್ಲಿ ಸ್ಕೂಟರ್ ನ ಬ್ಯಾಟರಿಯನ್ನು ಚಾರ್ಜ್ ಗೆ ಇಟ್ಟು ಮಲಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬ್ಯಾಟರಿ ಸ್ಫೋಟಗೊಂಡಿದ್ದು, ಕೋಣೆಯಲ್ಲಿ ಮಲಗಿದ್ದ ದಂಪತಿ ಗಂಭೀರ ಗಾಯಗೊಂಡಿದ್ದರು.
ಬೆಂಕಿಯ ಕೆನ್ನಾಲಗೆ ಇಡೀ ಮನೆಯನ್ನು ವ್ಯಾಪಿಸಿದ್ದು, ಸ್ಥಳೀಯರು ಕೂಡಲೇ ಮನೆಯಲ್ಲಿದ್ದವರ ರಕ್ಷಣೆಗೆ ಮುಂದಾದರು. ಉಸಿರುಗಟ್ಟಿ ತೀವ್ರ ಅಸ್ವಸ್ಥಗೊಂಡಿದ್ದ ಮಕ್ಕಳಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಾರ್ಗಮಧ್ಯೆ ಪತಿ ಕೊನೆಯುಸಿರೆಳೆದರು. ಪತ್ನಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬ್ಯಾಟರಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ.