ಡಿ.10 ರಂದು ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಚುನಾವಣೆ

Prasthutha|

ಬೆಂಗಳೂರು: ಮೈಸೂರು,ಮಂಡ್ಯ,ಕೊಡಗು,ರಾಯಚೂರು ಸೇರಿದಂತೆ ರಾಜ್ಯದ ಇಪ್ಪತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ.

- Advertisement -

ಈ ಸಂಬಂಧ ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದ್ದು,ಇಪ್ಪತ್ತು ಸ್ಥಾನಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ಚುನಾವಣೆಯ ಫಲಿತಾಂಶ ಡಿಸೆಂಬರ್ 14 ರಂದು ಪ್ರಕಟವಾಗಲಿದೆ.

ಮೈಸೂರು, ಮಂಡ್ಯ, ಕೊಡಗು, ರಾಯಚೂರು, ಬೀದರ್, ಗುಲ್ಬರ್ಗ, ಬಿಜಾಪುರ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಗೂ ಕೋಲಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣೆ ನಡೆಯಲಿದೆ.

- Advertisement -

ಚುನಾವಣೆ ಸಂಬಂಧ ನವೆಂಬರ್ 16 ರಂದು ಅಧಿಸೂಚನೆ ಪ್ರಕಟವಾಗಲಿದ್ದು,ನಾಮಪತ್ರ ಸಲ್ಲಿಸಲು ನವೆಂಬರ್ 23 ಕೊನೆಯ ದಿನವಾಗಿರುತ್ತದೆ.

ನವೆಂಬರ್ 24 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು,ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆಯ ದಿನವಾಗಿದೆ.

ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದ್ದು ಅಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.

ಮತ ಎಣಿಕೆ ಕಾರ್ಯ ಡಿಸೆಂಬರ 14 ರಂದು ನಡೆಯಲಿದ್ದು ನಂತರ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.

ಮೈಸೂರಿನ ಸಂದೇಶ್ ನಾಗರಾಜ್,ಮಂಡ್ಯದ ಎನ್.ಅಪ್ಪಾಜಿ ಗೌಡ,ಕೊಡಗಿನ ಎಂ.ಪಿ.ಸುನೀಲ್ ಸುಬ್ರಮಣಿ,ರಾಯಚೂರಿನ ಬಸವರಾಜ ಪಾಟೀಲ್ ಇಟಗಿ ಸೇರಿದಂತೆ ಹಾಲಿ ಇಪ್ಪತ್ತು ಮಂದಿ ವಿಧಾನಪರಿಷತ್ತಿನ ಸದಸ್ಯರು ನಿವೃತ್ತರಾಗಲಿದ್ದು,ಇದರಿಂದಾಗಿ ತೆರವಾಗುವ ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ.



Join Whatsapp