ನವದೆಹಲಿ: ಕೆಲ ದಿನಗಳಿಂದ ಸುದ್ದಿಯಲ್ಲಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಇಂದು ಬ್ರೇಕ್ ಬಿದ್ದಿದ್ದು, ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.
ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿರುವ ಪ್ರಶಾಂತ್ ಕಿಶೋರ್, ಇಎಜಿಯ ಭಾಗವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಮತ್ತು ಚುನಾವಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪಕ್ಷದ ಉದಾರವಾದ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೇನೆ. ನನ್ನ ವಿನಮ್ರ ಅಭಿಪ್ರಾಯದಲ್ಲಿ, ಪರಿವರ್ತನಾತ್ಮಕ ಸುಧಾರಣೆಗಳ ಮೂಲಕ ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಸರಿಪಡಿಸಲು ನನಗಿಂತಲೂ ಹೆಚ್ಚಾಗಿ ಪಕ್ಷಕ್ಕೆ ನಾಯಕತ್ವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯವಿದೆ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಗೆ ನಿರಾಕರಿಸಿರುವುದರ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ,ಪ್ರಶಾಂತ್ ಕಿಶೋರ್ ಅವರೊಂದಿಗಿನ ಪ್ರಸ್ತುತಿ ಮತ್ತು ಚರ್ಚೆಯ ನಂತರ, ಕಾಂಗ್ರೆಸ್ ಅಧ್ಯಕ್ಷರು 2024 ರ ಸಶಕ್ತ ಕ್ರಿಯಾ ಗುಂಪನ್ನು ರಚಿಸಿದ್ದು, ಕೆಲವು ಜವಾಬ್ದಾರಿಯೊಂದಿಗೆ ಭಾಗವಾಗಲು ಪಕ್ಷಕ್ಕೆ ಸೇರ್ಪಡೆಗೊಳ್ಳಲು ಅವರನ್ನು ಆಹ್ವಾನಿಸಿದ್ದಾರೆ. ಅವರು ನಿರಾಕರಿಸಿದ್ದಾರೆ. ಪಕ್ಷಕ್ಕೆ ನೀಡಿದ ಅವರ ಪ್ರಯತ್ನಗಳು ಮತ್ತು ಸಲಹೆಯನ್ನು ನಾವು ಶ್ಲಾಘಿಸುತ್ತೇವೆ ಎಂದು ಹೇಳಿದ್ದಾರೆ.
ಈ ಹಿಂದೆ ಪ್ರಶಾಂತ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹಿತ ಹಲವು ಪಕ್ಷದ ಮುಖಂಡರೊಂದಿಗೆ ಹಲವು ಸುತ್ತಿನ ಮಾತುಕತೆ ಕೂಡ ನಡೆದಿತ್ತು.