ಕುಂಬಾರರ ಸಂಘದ 500 ಕೋಟಿ ಆಸ್ತಿ ಕಬಳಿಸಲು ಚುನಾವಣೆಯಲ್ಲಿ ಭಾರೀ ಗೋಲ್ ಮಾಲ್; ಚುನಾವಣಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

Prasthutha|

ಬೆಂಗಳೂರು; ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಕುಂಬಾರ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಕುಂಬಾರ ಸಂಘಕ್ಕೆ ಮಾರ್ಚ್ 27 ರಂದು ನಡೆದ ಚುನಾವಣೆಯಲ್ಲಿ ಭಾರೀ ಅಕ್ರಮಗಳು ನಡೆದಿದ್ದು, ಚುನಾವಣೆಯ ಎಲ್ಲಾ ಸತ್ ಸಂಪ್ರದಾಯಗಳು, ರೀತಿ – ರಿವಾಜುಗಳು, ನೀತಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿರುವುದು ಬಯಲಾಗಿದೆ. ರಿಜಿಸ್ಟ್ರಾರ್ ಆಫ್ ಕೋ ಅಪರೇಟಿವ್ ಸೊಸೈಟಿ ನಿಯಮಗಳಡಿ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದ ಪಿ. ಮಂಜುನಾಥ್ ಎಂಬ ಅಧಿಕಾರಿ ಒಂದು ಬಣದ ಆಸೆ, ಆಮಿಷಗಳಿಗೆ ಬಲಿಯಾಗಿ ರಾಜಾರೋಷವಾಗಿ ಅಕ್ರಮ ಎಸಗಿದ್ದಾರೆ ಎಂದು ಕುಂಬಾರ ಸಂಘದ ಮತ್ತೊಂದು ಬಣ ದಾಖಲೆ ಸಮೇತ ಗಂಭೀರ ಆರೋಪ ಮಾಡಿದೆ.

- Advertisement -

ಸಿಸಿ ಟಿವಿಯಲ್ಲಿ ದಾಖಲಾಗಿರುವ ಅಕ್ರಮಗಳ ಸಂಪೂರ್ಣ ದಾಖಲೆಗಳನ್ನು ಸಿಡಿ ಮೂಲಕ ಬಿಡುಗಡೆ ಮಾಡಿರುವ ಸಂಘದ ಪ್ರಮುಖರು ಚುನಾವಣೆಯನ್ನು ರದ್ದುಪಡಿಸಿ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಬೇಕು. ಚುನಾವಣಾಧಿಕಾರಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇವರಿಗೆ ಬೆಂಬಲ ನೀಡಿದ 136 ಸಹಾಯಕ ಚುನಾವಣಾ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಮುಖಂಡರಾದ ಬದ್ರಿ ಪ್ರಸಾದ್, ಆರ್.ಎಸ್. ಚಂದ್ರಶೇಖರ್, ಡಿ.ಕೆ. ಗೋಪಾಲ್, ರಮೇಶ್, ಎಂ.ಎನ್. ದೀಪು, ಆರ್.ಎಸ್. ಚಂದ್ರಶೇಖರ್, ಶಶಿಕಲಾ ಮತ್ತಿತರರು, ಚುನಾವಣೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದ್ದ ಚುನಾವಣಾಧಿಕಾರಿ ಸಂಘದಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ. ಜನಾಂಗದ ಅಭಿವೃದ್ಧಿಗಾಗಿ ನಡೆದ ಚುನಾವಣೆಯಲ್ಲಿ ಅವರು ಲಂಚ ಪಡೆದು ಅಕ್ರಮ ಕೂಟವನ್ನು ಬೆಂಬಲಿಸಿದ್ದು, ಸಂಘದ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಆರೋಪಿಸಿದರು.

- Advertisement -

ಕುಂಬಾರರ ಸಂಘದಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇದ್ದು, ಇದನ್ನು ಕಬಳಿಸಲು ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸ ಮೂರ್ತಿ, ಎಂ. ಶ್ರೀನಿವಾಸಪ್ಪ, ಶಂಕರ್, ಭಾಸ್ಕರ್, ಎಂ.ಎನ್. ಜಯಕುಮಾರ್ ಮತ್ತಿತರ ತಂಡ ಸಂಘದ ಯಾವುದೇ ಚಟುವಟಿಕೆ ನಡೆಸಬಾರದು. ಇವರು ಹಾಗೂ ಚುನಾವಣಾ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶೀಘ್ರದಲ್ಲೇ ಫ್ರೀಡಂ ಪಾರ್ಕ್ ನಿಂದ ಮುಖ್ಯಮಂತ್ರಿ ಮನೆವರೆಗೆ ಪಾದಯಾತ್ರೆ ಕೈಗೊಂಡು ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

ಸಹಕಾರ ಸಂಘಗಳಡಿ ನೊಂದಣಿಯಾಗಿರುವ ಸಂಘ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಲುವಾಗಿ ರಚಿಸಲಾಗಿರುವ ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತರು, ಸಹಕಾರ ಇಲಾಖೆ ಕಾರ್ಯದರ್ಶಿ ಮತ್ತು ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಸಹಕಾರ ಉಪ ನಿಬಂಧಕರಿಗೆ ಈ ಸಂಬಂಧ ದೂರು ಸಲ್ಲಿಸಿದ್ದು, ಚುನಾವಣಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಮತ್ತೆ ಹೊಸದಾಗಿ ಚುನಾವಣೆ ನಡೆಯುವ ತನಕ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಆರೋಪವೇನು?

ಮಾರ್ಚ್ 27 ರಂದು ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯ ರಾಯರಾಯ ಕಲ್ಯಾಣ ಮಂಟಪದಲ್ಲಿ ಚುನಾವಣೆ ನಡೆದಿದ್ದು, ಕಲ್ಯಾಣ ಮಂಟಪದಲ್ಲಿದ್ದ 20ಕ್ಕೂ ಹೆಚ್ಚು ಸಿ.ಸಿ. ಕ್ಯಾಮರಾಗಳಲ್ಲಿ ಅಕ್ರಮಗಳು ದಾಖಲಾಗಿವೆ. ಚುನಾವಣಾಧಿಕಾರಿಗಳು ಹಾಗೂ ತಮ್ಮ ಸಿಬ್ಬಂದಿ ವರ್ಗ ಒಂದು ಗುಂಪಿನ ಪರವಾಗಿ ಅಂದರೆ ಈಗ ಅಯ್ಕೆಯಾಗಿರುವವರ ಪರವಾಗಿ ತಮ್ಮ ಮನಸೋ ಇಚ್ಛೆ ಮತ ಚಲಾಯಿಸಿದ್ದಾರೆ. ಮತ್ತು ಚಲಾಯಿಸುವಂತೆ ಮತಗಟ್ಟೆಗಳಲ್ಲಿ ಪ್ರೇರೇಪಿಸಿದ್ದಾರೆ. ಮತದಾನದ ಗೌಪ್ಯತೆಯನ್ನು ಉಲ್ಲಂಘನೆ ಮಾಡಲು ಚುನಾವಣಾಧಿಕಾರಿಯೇ ಅನುವುಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಕಣದಲ್ಲಿದ್ದ ಅಭ್ಯರ್ಥಿಗಳು ಮತದಾರರಿಂದ ಮತಪತ್ರ ಕಸಿದು ಮತ ಚಲಾಯಿಸಿದ್ದಾರೆ. ಮತದಾನ ಕೇಂದ್ರಕ್ಕೆ ಬಾರದ  ನೂರಾರು ಸದಸ್ಯರ ಪರವಾಗಿ ಮತ ಚಲಾವಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದಲ್ಲದೇ ಕುಂಬಾರರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಂಘದ ಉಪವಿಧಿಗಳ ಪ್ರಕಾರ 5 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಬೇಕೆಂಬ ನಿಯಮವಿದ್ದು, ಇದನ್ನು ಚುನಾವಣಾಧಿಕಾರಿ ಪರಿಪಾಲಿಸಿಲ್ಲ. ಚುನಾವಣಾ ವೇಳಾ ಪಟ್ಟಿ ನಿಗದಿ, ಹಲವಾರು ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ ಆಕ್ಷೇಪಗಳ ಬಗ್ಗೆಯೂ ಇವರು ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆಯಲ್ಲಿ ಅಕ್ರಮ ಎಸಗಿದ ತಂಡದ ಅನುಕೂಲಕ್ಕೆ ತಕ್ಕಂತೆ ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ಸದರಿ ಅಧಿಕಾರಿ ತಮಗೆ ಆಪ್ತರಾದ ಮತ್ತು ನಿವೃತ್ತರಾದವರನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಿಸಿಕೊಂಡು ಗೋಲ್ ಮಾಲ್ ನಡೆಸಿದ್ದಾರೆ.

ಇಷ್ಟಕ್ಕೂ ಈ ಚುನಾವಣೆ ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ನಡೆದಿತ್ತು. 2017 ರ ಮಾರ್ಚ್ 5 ರಂದು ನಡೆದಿದ್ದ ಚುನಾವಣೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯು ನೀಡದೇ ಇರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಹೈಕೋರ್ಟ್ ನ ಏಕ ಸದಸ್ಯಪೀಠ 2020ರ ಅಕ್ಟೋಬರ್ 15 ರಂದು ಸಂಪೂರ್ಣ ಚುನಾವಣೆಯನ್ನೇ  ಅಸಿಂಧುಗೊಳಿಸಿತು. ಚುನಾವಣೆ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯಪೀಠ, 2021 ರ, ಡಿಸೆಂಬರ್ 2 ರಂದು ಮೂರು ತಿಂಗಳೊಳಗೆ ಚುನಾವಣೆ ನಡೆಸುವಂತೆ ಆದೇಶಿಸಿತು. ನ್ಯಾಯಾಲಯದ ನಿರ್ದೇಶನದಂತೆ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಅಕ್ರಮಗಳನ್ನು ಎಸಗಿದ್ದು, ಇವರು ನ್ಯಾಯಾಂಗ ವ್ಯವಸ್ಥೆಗೂ ಅಪಚಾರ ಮಾಡಿದ್ದಾರೆ ಎಂದು ಆರೋಪಿಸಿದರು.



Join Whatsapp