ಬೆಂಗಳೂರು: ಕಾಂಗ್ರೆಸ್ ಪಕ್ಷ, ಇತ್ತೀಚಿನ ಕೆಲವು ಚುನಾವಣಾ ಸೋಲುಗಳ ತಾತ್ಕಾಲಿಕವಾದ ಹಿನ್ನಡೆಯನ್ನು ಎದುರಿಸಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ದೇಶವನ್ನು ಮತ್ತೆ ಮುನ್ನಡೆಸುವ ದೈತ್ಯ ರಾಜಕೀಯ ಶಕ್ತಿಯಾಗಿ ಎದ್ದು ಬರಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪತಿಯ ಅಗಲಿಕೆಯ ನೋವು ಮತ್ತು ಎರಡು ಎಳೆಯ ಮಕ್ಕಳ ಭವಿಷ್ಯದ ಕಾಳಜಿಯಿಂದ ರಾಜಕೀಯದಿಂದ ದೂರವುಳಿದಿದ್ದ ಸೋನಿಯಾ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಒತ್ತಾಯದಿಂದ ಸಕ್ರಿಯ ರಾಜಕೀಯಕ್ಕೆ ಎಳೆದು ತಂದ ಕೆಲವು ನಾಯಕರೇ ಈಗ ಸೋನಿಯಾರ ಸೈದ್ಧಾಂತಿಕ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೋಮುವಾದಿ ರಾಜಕಾರಣ, ಮಾಧ್ಯಮಗಳ ಮೂಲಕ ನಡೆಸುತ್ತಿರುವ ಸುಳ್ಳುಗಳ ಪ್ರಚಾರ, ದುಡ್ಡಿನ ಬಲದ ಚುನಾವಣಾ ತಂತ್ರ-ಕುತಂತ್ರಗಳ ಎದುರು ಸೈದ್ಧಾಂತಿಕ ರಾಜಕಾರಣಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಇದು ತಾತ್ಕಾಲಿಕ ಹಿನ್ನಡೆಯಾಗಿದ್ದು, ಸತ್ಯ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ಕೇಂದ್ರ ಸಹಿತ ಹದಿನೈದಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು ಎಂಬುವುದನ್ನು ಇಂದು ಅವರ ನಾಯಕತ್ವವನ್ನು ಪ್ರಶ್ನಿಸುವವರು ನೆನಪು ಮಾಡಿಕೊಳ್ಳಬೇಕಾಗಿದೆ. ಕೆಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು. ಆದರೆ ಆಹಾರ, ಶಿಕ್ಷಣ, ಉದ್ಯೋಗ ಮತ್ತು ಮಾಹಿತಿಯ ಶಾಸನಾತ್ಮಕ ಹಕ್ಕನ್ನು ನೀಡಿದ್ದ ಕಾರ್ಯಕ್ರಮಗಳ ರೂವಾರಿಯಾದ ಸೋನಿಯಾ ಗಾಂಧಿಯವರು ದೇಶದ ಜನತೆಯ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಆ ಚಿತ್ರಣವನ್ನು ಎಂದಿಗೂ ಅಳಿಸಲಾಗದು ಎಂದು ಅವರು ಹೇಳಿದರು.