ನವದೆಹಲಿ: ಮತದಾನದಲ್ಲಿ ದೇಶೀಯ ವಲಸೆ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು ಅಭಿವೃದ್ಧಿಪಡಿಸಿದೆ.
ಜನವರಿ 16ರಂದು ಇದರ ಪ್ರದರ್ಶನಕ್ಕೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಆಹ್ವಾನ ನೀಡಿದ್ದು, ಇದನ್ನು ಕಾರ್ಯಗತಗೊಳಿಸುವಲ್ಲಿ ಕಾನೂನು, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಕುರಿತು ರಾಜಕೀಯ ಪಕ್ಷಗಳಿಂದ ಚುನಾವಣಾ ಆಯೋಗವು ಅಭಿಪ್ರಾಯಗಳನ್ನು ಕೇಳಿದೆ.
ಸಾರ್ವಜನಿಕ ವಲಯದ ಉದ್ಯಮದಿಂದ ಅಭಿವೃದ್ಧಿಪಡಿಸಲಾಗಿರುವ ರಿಮೋಟ್ ಇವಿಎಂ ಇದಾಗಿದ್ದು, ಒಂದೇ ಮತಗಟ್ಟೆಯಿಂದ 72 ಕ್ಷೇತ್ರಗಳನ್ನು ನಿರ್ವಹಿಸಬಹುದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಮತದಾನದ ಬಗ್ಗೆ ಯುವಕರು ಮತ್ತು ನಗರದ ನಿವಾಸಿಗಳ ನಿರಾಸಕ್ತಿಗಳ ಬಗ್ಗೆ ಗಮನ ಹರಿಸಿದ ನಂತರ, ರಿಮೋಟ್ ಮತದಾನವು ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಪರಿವರ್ತನೆಯ ಉಪಕ್ರಮವಾಗಿದೆ ಎಂದು ಹೇಳಿದ್ದಾರೆ.
ರಿಮೋಟ್ ಇವಿಎಂ ಜಾರಿಗೆ ಬಂದರೆ, ವಲಸೆ ಕಾರ್ಮಿಕರು ಮತದಾನ ಮಾಡಲು ತಮ್ಮ ತವರು ಕ್ಷೇತ್ರಕ್ಕೆ ಹೋಗುವ ಅಗತ್ಯವೇ ಇರುವುದಿಲ್ಲ. ಇದ್ದಲ್ಲಿಯೇ ಮತದಾನ ಮಾಡಬಹುದಾಗಿದೆ.