ಅಮೆರಿಕದಿಂದ ಹಿಂದಿರುಗಿ ಭಾರತದಲ್ಲಿ ನೆಲಸಲು ಮುಂದಾಗಿದ್ದ ವೃದ್ಧೆಗೆ 2.5 ಕೋಟಿ ರೂ.ವಂಚನೆ; ಆರೋಪಿ ಬಂಧನ

Prasthutha|

ಬೆಂಗಳೂರು: ಅಮೆರಿಕದಿಂದ ಮರಳಿ ಭಾರತದಲ್ಲಿ ವಾಸ್ತವ್ಯ ಹೊಡಲು ಮುಂದಾಗಿದ್ದ ವೃದ್ಧೆಗೆ ಬರೋಬ್ಬರಿ 2.5 ಕೋಟಿ ರೂ. ವಂಚಿಸಿದ ಸರ್ವಿಸ್ ಅಪಾರ್ಟ್ಮೆಂಟ್ ಸಿಬ್ಬಂದಿಯೊಬ್ಬನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

- Advertisement -

ಬಿಹಾರ ಮೂಲದ ಕನ್ಹಯ್ಯ ಕುಮಾರ್ ಯಾದವ್ (35) ಬಂಧಿತ ಆರೋಪಿಯಾಗಿದ್ದಾನೆ. ಮಣಿ ತಿರುಮಲೈ (75) ಮೋಸಹೋದ ವೃದ್ಧೆಯಾಗಿದ್ದಾರೆ.

ಕಳೆದ 1973ರಲ್ಲಿ ಪತಿಯೊಂದಿಗೆ ಅಮೆರಿಕಕ್ಕೆ ತೆರಳಿ ನೆಲೆಸಿದ್ದ ಮಣಿ ತಿರುಮಲೈ, ಪತಿಯ ನಿಧನದ ನಂತರ ಕೋವಿಡ್ ಸಂದರ್ಭದಲ್ಲಿ ಭಾರತಕ್ಕೆ ಮರಳಿದ್ದರು. ಈ ವೇಳೆ, ಹುಳಿಮಾವಿನ ಸಾರ್ವಭೌಮನಗರದ ಸರ್ವಿಸ್ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿದ್ದ ಮಣಿ ತಿರುಮಲೈಗೆ ಆರೋಪಿ ಕನ್ಹಯ್ಯ ಕುಮಾರ್ ಯಾದವ್ ಪರಿಚಯವಾಗಿದ್ದಾನೆ.

- Advertisement -

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಣಿ ತಿರುಮಲೈಗೆ ಸಹಾಯ ಮಾಡುತ್ತಾ ನಂಬಿಕೆ ಸಂಪಾದಿಸಿದ್ದ ಆರೋಪಿ ಅವರ ಮಗನಂತೆ ಬಾಂಧವ್ಯ ಬೆಳೆಸಿಕೊಂಡಿದ್ದ. ಮಣಿ ತಿರುಮಲೈ ಸಹ ಆರೋಪಿಯನ್ನು ಸಂಪೂರ್ಣವಾಗಿ ನಂಬಿದ್ದರು. ಇದೇ ವೇಳೆ ಬೆಂಗಳೂರಿನಲ್ಲಿ ಮನೆ ಖರೀದಿಗಾಗಿ ಹುಡುಕಾಟ ನಡೆಸುತ್ತಿದ್ದ ತಿರುಮಲೈಗೆ ಆರೋಪಿ ಕನ್ಹಯ್ಯನೇ ಕಳೆದ ಏಪ್ರಿಲ್ನಲ್ಲಿ ಬಿಟಿಎಂ ಲೇಔಟ್ ನಾಲ್ಕನೇ ಹಂತದಲ್ಲಿ ನಾಲ್ಕು ಅಂತಸ್ತಿನ ಮನೆಯನ್ನು ತೋರಿಸಿದ್ದ. ಮಾತುಕತೆಯ ಬಳಿಕ 2.65 ಕೋಟಿಗೆ ಮನೆ ಖರೀದಿಗೆ ತಿರುಮಲೈ ನಿರ್ಧರಿಸಿದ್ದರು. ಅಷ್ಟರಲ್ಲಿ ತಮ್ಮ ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಈ ವೇಳೆ ಮನೆ ಮಾಲೀಕನಿಗೆ ಜುಲೈ ತನಕ ಕಾಯುವಂತೆ ತಿರುಮಲೈ ಹೇಳಿದ್ದರು.

ಆದರೆ, ಮಾಲೀಕ ತನಗೆ ತುರ್ತು ಹಣದ ಅವಶ್ಯಕತೆಯಿರುವುದರಿಂದ ಕಾಯಲು ಒಪ್ಪದಿದ್ದಾಗ ಆರೋಪಿ ತಿರುಮಲೈಗೆ ‘ತಾವು ನನಗೆ ಹಣ ನೀಡಿದರೆ ತನ್ನ ಹೆಸರಿನಲ್ಲಿ ಮನೆ ಖರೀದಿಸಿ ನೀವು ಮರಳಿದ ಬಳಿಕ ನಿಮ್ಮ ಹೆಸರಿಗೆ ವರ್ಗಾಯಿಸಿ ಕೊಡುವುದಾಗಿ’ ನಂಬಿಸಿದ್ದನು. ಆರೋಪಿಯ ಮಾತು ನಂಬಿ ಮೂರು ಚೆಕ್ ರೂಪದಲ್ಲಿ 2.5 ಕೋಟಿ ರೂ.ವನ್ನು ತಿರುಮಲೈ ಆರೋಪಿಗೆ ನೀಡಿದ್ದರು. ಜುಲೈ 8ರಂದು ಬೆಂಗಳೂರಿಗೆ ವಾಪಸ್ ಆಗಿ ವಿಚಾರಿಸಿದಾಗ ಆರೋಪಿ ‘ಕಾನೂನುಬದ್ಧವಾಗಿ ಮನೆ ತನ್ನ ಹೆಸರಿನಲ್ಲಿದ್ದು ಹಸ್ತಾಂತರಿಸಲು ಸಾಧ್ಯವಿಲ್ಲವೆಂದು’ ಬೆದರಿಕೆ ಹಾಕಿದ್ದ.

 ಇದರಿಂದ ಬೇಸತ್ತ ತಿರುಮಲೈ ಜುಲೈ 28ರಂದು ಹುಳಿಮಾವು ಠಾಣೆಗೆ ದೂರು ನೀಡಿದ್ದರು. ಜುಲೈ 30ರಂದು ಮುಂಬೈಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಆರೋಪಿಯನ್ನು ಸಿಟಿ ರೈಲ್ವೇ ನಿಲ್ದಾಣದಲ್ಲಿ ಹುಳಿಮಾವು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



Join Whatsapp