ಕೋಲ್ಕತ್ತಾ: ಟಿಎಂಸಿ ಮುಖಂಡ ಬಹದ್ದೂರ್ ಶೇಖ್ ಹತ್ಯೆಯ ಬಳಿಕ ಪಶ್ಚಿಮ ಬಂಗಾಳದ ಬಿರ್ಭೂಮ್ ನಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ ಎಂದು ಮಂದಿಯ ಮೃತದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಮನೋಜ್ ಮಾಳವಿಯಾ ತಿಳಿಸಿದ್ದಾರೆ. ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇಂದು ಬೆಳಗ್ಗೆ ಒಂದೇ ಮನೆಯಿಂದ ಕನಿಷ್ಠ ಏಳು ಮಂದಿಯ ಶವವನ್ನು ಹೊರತೆಗೆಯಲಾಗಿದ್ದು, ಈ ಹಿಂದೆ ಹತ್ತು ಮಂದಿ ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ. ಈ ಹಿಂದೆ ನೀಡಿದ ಅಂಕಿಅಂಶಗಳು ಸರಿಯಾಗಿಲ್ಲ ಮತ್ತು ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಮಾಳವಿಯಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ರಾತ್ರಿ ಬಹದ್ದೂರು ಶೇಖ್ ಹತ್ಯೆ ನಡೆದಿದ್ದು, ನಂತರ ನಡೆದ ಘರ್ಷಣೆಯಲ್ಲಿ ಸಮೀಪದಲ್ಲಿದ್ದ 7 – 8 ಮನೆಗಳಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.